July 17, 2026

ಮುರುಡೇಶ್ವರ ಅದೃಷ್ಟ ಡ್ರಾ ಹೆಸರಲ್ಲಿ ನಕಲಿ ಲಾಟರಿ ಜಾಲ: ವರ್ಷದ ಬಳಿಕ ಕದೀಮ ವಶಕ್ಕೆ

ಭಟ್ಕಳ: ಪ್ರಸಿದ್ಧ ಮುರುಡೇಶ್ವರ ದೇವಸ್ಥಾನದ ಹೆಸರನ್ನು ದುರುಪಯೋಗಪಡಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ “ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ” ಹೆಸರಿನಲ್ಲಿ ನಕಲಿ ಲಾಟರಿ ಟಿಕೆಟ್ ಮಾರಾಟ ಮಾಡಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಸುಮಾರು ಒಂದು ವರ್ಷದ ಸುದೀರ್ಘ ಹಾಗೂ ವ್ಯವಸ್ಥಿತ ತನಿಖೆಯ ಬಳಿಕ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಸಾಲಖನಗಾಂವ ನಿವಾಸಿ ನರಸಿಂಗ್ ವೆಂಕಟರಾವ್ ತಗರಖೇಡೆ (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ದೇವಸ್ಥಾನದ ಹೆಸರಲ್ಲಿ ವಂಚನೆಯ ಜಾಲ:

ಆರೋಪಿಯು ಮುರುಡೇಶ್ವರ ದೇವಸ್ಥಾನದ ಪವಿತ್ರ ಭಾವಚಿತ್ರವನ್ನು ಬಳಸಿಕೊಂಡು “ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ” ಎಂಬ ಹೆಸರಿನ ನಕಲಿ ಕರಪತ್ರಗಳನ್ನು ಸೃಷ್ಟಿಸಿದ್ದನು. ಅಷ್ಟೇ ಅಲ್ಲದೆ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ ನಕಲಿ ಖಾತೆಗಳನ್ನು ತೆರೆದು, ಆಕರ್ಷಕ ಬಹುಮಾನಗಳ ಲಕ್ಕಿ ಡ್ರಾ ನಡೆಯುತ್ತಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದನು. ಇದನ್ನು ನಂಬಿದ ನೂರಾರು ಸಾರ್ವಜನಿಕರಿಂದ ಡಿಜಿಟಲ್ ರೂಪದಲ್ಲಿ ಹಣ ಪಡೆದು ವಂಚನೆ ಎಸಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ನಕಲಿ ಜಾಲದ ಕುರಿತು ಮುರುಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಮದನ ಶೆಟ್ಟಿ (73) ಅವರು 2025ರ ಆಗಸ್ಟ್‌ 6ರಂದು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ಮೂರು ರಾಜ್ಯಗಳಲ್ಲಿ ತಲಾಶ್ ನಡೆಸಿದ ವಿಶೇಷ ತಂಡ:

ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಜಿ., ಡಿವೈಎಸ್ಪಿ ಗಿರೀಶ ಬಿ. ಹಾಗೂ ಸಿಪಿಐ ಜಗದೀಶ ಹಂಚಿನಾಳ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಹಣಮಂತ ಬಿರಾದಾರ ಮತ್ತು ಪಿಎಸ್‌ಐ ಲೋಕನಾಥ ರಾಥೋಡ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಆರೋಪಿಯು ಪದೇ ಪದೇ ಸ್ಥಳ ಬದಲಾಯಿಸುತ್ತಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಕೊನೆಗೆ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಬೀದರ ಜಿಲ್ಲೆಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದ ವಿಶೇಷ ತಂಡವು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ನಕಲಿ ಲಾಟರಿ ದಂಧೆಯಲ್ಲಿ ಇನ್ನು ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.

About The Author

error: Content is protected !!