August 24, 2026

ಖಾಸಗಿ ಕಾರುಗಳಲ್ಲಿ ಅಕ್ರಮ ಬಾಡಿಗೆ ಸೇವೆ: ಕಠಿಣ ಕ್ರಮಕ್ಕೆ ಭಟ್ಕಳ ಟ್ಯಾಕ್ಸಿ ಚಾಲಕರ ಆಗ್ರಹ; RTO ಕಾರ್ಯಾರಚರಣೆ, ದಂಡ!

ಭಟ್ಕಳ: ಖಾಸಗಿ ವಾಹನಗಳನ್ನು ಬಳಸಿಕೊಂಡು ಅಕ್ರಮವಾಗಿ ಪ್ರವಾಸಿಗರಿಂದ ಬಾಡಿಗೆ ಪಡೆಯುತ್ತಿರುವ ಪ್ರಕರಣಗಳಿಗೆ ತಕ್ಷಣವೇ ಕಡಿವಾಣ ಹಾಕಬೇಕೆಂದು ಆಗ್ರಹಿಸಿ, ಭಟ್ಕಳ ಟ್ಯಾಕ್ಸಿ ಚಾಲಕ–ಮಾಲಕರ ಸಂಘದ ನಿಯೋಗವು ಹೊನ್ನಾವರ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (RTO) ಮನವಿ ಸಲ್ಲಿಸಿದೆ.

ಖಾಸಗಿ (ವೈಟ್‌ ಬೋರ್ಡ್‌) ವಾಹನಗಳಿಗೆ ಬಾಡಿಗೆ ಸೇವೆ ನಡೆಸಲು ಕಾನೂನಿನಲ್ಲಿ ಅನುಮತಿಯಿಲ್ಲ. ಆದಾಗ್ಯೂ ಕೆಲವರು ಅಕ್ರಮವಾಗಿ ಪ್ರಯಾಣಿಕರ ಸಾಗಣೆ ಮಾಡುತ್ತಿದ್ದಾರೆ. ಇದರಿಂದ ನಿಯಮಾನುಸಾರ ಪರವಾನಗಿ ಪಡೆದು, ತೆರಿಗೆ ಪಾವತಿಸಿ ಟ್ಯಾಕ್ಸಿ ಸೇವೆ ನಡೆಸುತ್ತಿರುವ ಚಾಲಕ-ಮಾಲಕರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೆಯೂ ಸಭೆ ನಡೆಸಿದ್ದ ಜಿಲ್ಲಾಧಿಕಾರಿ:

ಈ ಕುರಿತು ಸಂಘವು ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಮನವಿಗೆ ಸ್ಪಂದಿಸಿದ್ದ ಅಂದಿನ ಜಿಲ್ಲಾಧಿಕಾರಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಖಾಸಗಿ ವಾಹನಗಳ ಅಕ್ರಮ ಬಾಡಿಗೆ ಸೇವೆಗೆ ತಡೆ ನೀಡುವಂತೆ ಸೂಚಿಸಿದ್ದರು. ಅದರಂತೆ ಭಟ್ಕಳದಲ್ಲಿ ಕೆಲವು ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಕ್ರಮ ಜರುಗಿಸಿತ್ತು.

ಆದರೆ, ಅಧಿಕಾರಿಗಳ ಕಣ್ಣು ತಪ್ಪಿಸಿ ಮತ್ತೆ ಕೆಲವು ಖಾಸಗಿ ಕಾರುಗಳು ಪ್ರವಾಸಿಗರನ್ನು ಸಾಗಿಸುವ ದಂಧೆಯಲ್ಲಿ ತೊಡಗಿವೆ. ಆದ್ದರಿಂದ ಇಂತಹ ವಾಹನಗಳ ಮೇಲೆ ನಿರಂತರ ನಿಗಾ ಇಟ್ಟು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಸಾರಿಗೆ ಇಲಾಖೆಯಿಂದ ದಿಢೀರ್ ಕಾರ್ಯಾಚರಣೆ:

ಟ್ಯಾಕ್ಸಿ ಚಾಲಕರ ನಿಯೋಗ ಮನವಿ ಸಲ್ಲಿಸಿದ ಬೆನ್ನಲ್ಲೇ ತಕ್ಷಣವೇ ಕಾರ್ಯಪ್ರವೃತ್ತರಾದ ಸಾರಿಗೆ ಇಲಾಖೆ ಅಧಿಕಾರಿಗಳು ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

  • ಅಕ್ರಮ ಬಾಡಿಗೆ ಸೇವೆಯಲ್ಲಿ ತೊಡಗಿದ್ದ ಕೆಲವು ಖಾಸಗಿ ವಾಹನಗಳನ್ನು ಪತ್ತೆಹಚ್ಚಿ ದಂಡ ವಿಧಿಸಲಾಗಿದೆ.
  • ನಿಯಮ ಉಲ್ಲಂಘಿಸಿದ ಒಂದು ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಕಾನೂನುಬದ್ಧವಾಗಿ ಟ್ಯಾಕ್ಸಿ ಸೇವೆ ನಡೆಸುತ್ತಿರುವವರ ಹಿತರಕ್ಷಣೆಗಾಗಿ ಅಕ್ರಮ ವಾಹನಗಳ ವಿರುದ್ಧ ಈ ಕಾರ್ಯಾಚರಣೆ ಮುಂದೆಯೂ ನಿರಂತರವಾಗಿ ನಡೆಯಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ, ಉಪಾಧ್ಯಕ್ಷ ಮಹಮದ್ ಮುಸ್ತಾಕ್, ಪ್ರಧಾನ ಕಾರ್ಯದರ್ಶಿ ಜಗದೀಶ ನಾಯ್ಕ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

error: Content is protected !!