ಮಂಕಿ: ಇಲ್ಲಿನ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವತಿಯಿಂದ ರಕ್ಷಾಬಂಧನ ಹಬ್ಬವನ್ನು ಅತ್ಯಂತ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಮಂಕಿ ಪಟ್ಟಣ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ನೇರವಾಗಿ ಭೇಟಿ ನೀಡಿ, ಅಲ್ಲಿನ ಸಮುದಾಯ ಸಹಾಯಕರಿಗೆ (ಕೊರೊನಾ/ಸಮುದಾಯ ಯೋಧರು ಹಾಗೂ ಸಿಬ್ಬಂದಿ) ರಾಖಿ ಕಟ್ಟುವ ಮೂಲಕ ತಮ್ಮ ಗೌರವ ಮತ್ತು ಕೃತಜ್ಞತೆಯನ್ನು ಅರ್ಪಿಸಿದರು.
ಸಮಾಜದ ಭದ್ರತೆ, ಸಾರ್ವಜನಿಕ ಆರೋಗ್ಯ, ಸ್ವಚ್ಛತೆ ಹಾಗೂ ನಿರಂತರ ಸೇವೆಯಲ್ಲಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಸ್ಮರಿಸಿ ಗೌರವಿಸುವ ಸದುದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಿಬ್ಬಂದಿಗೆ ರಾಖಿ ಕಟ್ಟಿ, ಸಿಹಿ ಹಂಚಿ ಶುಭಾಶಯ ಕೋರಿದರು.




ನಿರಂತರ ಕರ್ತವ್ಯ ನಿರತರಾಗಿ ಹಬ್ಬದ ದಿನಗಳಲ್ಲಿ ಮನೆಗೆ ತೆರಳಿ ರಾಖಿ ಕಟ್ಟಿಸಿಕೊಳ್ಳಲಾಗದ ಹಲವು ಸಿಬ್ಬಂದಿ ಮತ್ತು ಕಾರ್ಮಿಕರಿಗೆ, ಶಾಲಾ ಮಕ್ಕಳೇ ಸ್ವತಃ ಮುತುವರ್ಜಿ ವಹಿಸಿ ರಾಖಿ ಕಟ್ಟಿದ್ದು ಪ್ರಗಾಢ ಸಹೋದರತ್ವ ಹಾಗೂ ಪ್ರೀತಿಯ ಭಾವನೆಯನ್ನು ಮೂಡಿಸಿತು. ಮಕ್ಕಳ ಈ ಮಮತೆಯ ನಡೆಗೆ ಎಲ್ಲ ಇಲಾಖೆಯ ಸಿಬ್ಬಂದಿ ಸಂತಸ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದರು.
“ರಕ್ಷಾಬಂಧನವು ಕೇವಲ ಅಣ್ಣ-ತಂಗಿಯರ ರಕ್ಷೆಯ ಬಂಧಕ್ಕಷ್ಟೇ ಸೀಮಿತವಾಗಿರದೆ, ಸಮಾಜದ ಸುರಕ್ಷತೆ ಹಾಗೂ ಸೇವೆಗಾಗಿ ಹಗಲಿರುಳು ಶ್ರಮಿಸುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ಪವಿತ್ರ ಹಬ್ಬವಾಗಿದೆ” ಎಂಬ ಉದಾತ್ತ ಸಂದೇಶವನ್ನು ವಿದ್ಯಾರ್ಥಿಗಳು ಸಾರಿದರು.

ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಹಾಗೂ ಕೃತಜ್ಞತಾ ಭಾವನೆಯನ್ನು ಬೆಳೆಸಿದ ಈ ಶ್ಲಾಘನೀಯ ಪ್ರಯತ್ನಕ್ಕೆ ಶಾಲೆಯ ಚೇರ್ಮನ್ ಶ್ರೀಯುತ ಅಣ್ಣಪ್ಪ ಆರ್. ನಾಯಕ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಪವಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
About The Author


More Stories
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ
ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರ ಎನ್. ಶೆಟ್ಟಿ ನಿಧನ