August 26, 2026

೧೯೭೮ರ ಪೂರ್ವದ ಅರಣ್ಯ ಭೂಮಿ ಒತ್ತುವರಿದಾರರ ಮರುಸಮೀಕ್ಷೆಗೆ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಲಿ: ಚಂದ್ರಕಾಂತ ಕೊಚರೇಕರ ಆಗ್ರಹ

ಹೊನ್ನಾವರ: ಸಮೀಕ್ಷೆಯ ಸಂದರ್ಭದಲ್ಲಿ ಕೈಬಿಟ್ಟುಹೋಗಿರುವ ೧೯೭೮ ರ ಪೂರ್ವದ ಅರ್ಹ ಅರಣ್ಯ ಭೂಮಿ ಒತ್ತುವರಿದಾರರ ಪ್ರಕರಣಗಳನ್ನು ಮರುಸಮೀಕ್ಷೆ ನಡೆಸಿ ಮಂಜೂರು ಮಾಡಲು ರಾಜ್ಯ ಸರ್ಕಾರ ತಕ್ಷಣವೇ ಅಗತ್ಯ ಮಧ್ಯಪ್ರವೇಶ ಮಾಡಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದು, ದಿನಾಂಕ ೧೩-೦೩-೨೦೧೫ ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣವೇ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದ್ದಾರೆ.

ಮರುಸಮೀಕ್ಷೆ ನಡೆಸಲು ನಿರ್ಲಕ್ಷ್ಯ: ೧೯೭೮ರ ಪೂರ್ವದ ಅರಣ್ಯ ಭೂಮಿ ಒತ್ತುವರಿ ಸಕ್ರಮಕ್ಕೆ ಸಂಬಂಧಿಸಿ ಕೈಬಿಟ್ಟುಹೋಗಿರುವ ಅರ್ಹ ಪ್ರಕರಣಗಳನ್ನು ಮರುಸಮೀಕ್ಷೆಯಿಂದ ಗುರುತಿಸಿ, ಕೇಂದ್ರ ಸರ್ಕಾರಕ್ಕೆ ಮಂಜೂರಾತಿ ಪ್ರಸ್ತಾವನೆ ಸಲ್ಲಿಸಲು ೨೦೧೫ರಲ್ಲೇ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಸಂಬಂಧಪಟ್ಟ ಇಲಾಖೆಗಳು ಇದುವರೆಗೆ ಯಾವುದೇ ಮರುಸಮೀಕ್ಷೆ ನಡೆಸಿಲ್ಲ ಹಾಗೂ ಪ್ರಸ್ತಾವನೆಯನ್ನೂ ಕಳುಹಿಸಿಲ್ಲ. ಇದರಿಂದಾಗಿ ರಾಜ್ಯದ ಸಾವಿರಾರು ಅರ್ಹ ರೈತರು ತಮ್ಮ ಅಧಿಭೋಗದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಕೊಚರೇಕರ ಕಳವಳ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ “ಸರ್ಕಾರದ ಸುತ್ತೋಲೆ ಇರುವುದು ನಿಜ, ಆದರೆ ನಮಗೆ ಇಲಾಖೆಯಿಂದ ಅಧಿಕೃತ ಆದೇಶ ಬಂದಿಲ್ಲ” ಎಂದು ಕೆಲವು ಡಿ.ಎಫ್.ಓ (DFO)ಗಳು ಸಬೂಬು ನೀಡುತ್ತಿರುವುದನ್ನು ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಲಕ್ಷಾಂತರ ಬಡವರ ಜೀವನೋಪಾಯ: ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಲಕ್ಷಾಂತರ ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಜನರು ವಸತಿ ಹಾಗೂ ಜೀವನೋಪಾಯಕ್ಕಾಗಿ ತಲೆತಲಾಂತರದಿಂದ ಅರಣ್ಯ ಭೂಮಿಯನ್ನೇ ನಂಬಿಕೊಂಡಿದ್ದಾರೆ. ೧೫-೦೫-೧೯೯೬ರಲ್ಲಿ ಕೇಂದ್ರ ಸರ್ಕಾರವು ೧೯೮೦ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ೧೯೭೮ರ ಪೂರ್ವದ ಒತ್ತುವರಿಗಳನ್ನು ಗುರುತಿಸಲು ಸೂಚಿಸಿತ್ತು. ಆದರೆ ಆಗ ನಡೆದ ಸಮೀಕ್ಷೆ ಸಮರ್ಪಕವಾಗಿರದೇ ಸಾವಿರಾರು ಅರ್ಹರು ಕೈಬಿಟ್ಟು ಹೋಗಿದ್ದರು.

ಅಂದಿನ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಮಟ್ಟದ ಸಭೆಯಲ್ಲೂ ಈ ಲೋಪವನ್ನು ಉಲ್ಲೇಖಿಸಿ, ಮರುಸಮೀಕ್ಷೆಗೆ ನಿರ್ಣಯಿಸಲಾಗಿತ್ತು. ಆದರೆ ಆ ನಿರ್ಣಯವೂ ಇದುವರೆಗೆ ಜಾರಿಯಾಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ವಿಷಯವನ್ನು ಪುನರ್ ಪರಿಶೀಲಿಸಿ, ೧೯೭೮ರ ಪೂರ್ವದ ಅರ್ಹ ಒತ್ತುವರಿದಾರರಿಗೆ ನ್ಯಾಯ ಒದಗಿಸಲು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

About The Author

error: Content is protected !!