September 11, 2026

ಅರಣ್ಯ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದ 65 ಹುತಾತ್ಮರಿಗೆ ಕಾರವಾರದಲ್ಲಿ ಶ್ರದ್ಧಾಂಜಲಿ

ಕಾರವಾರ: ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮರನ್ನು ಸ್ಮರಿಸುವ ಸಲುವಾಗಿ ಕಾರವಾರ ಅರಣ್ಯ ವಿಭಾಗದ ಆವರಣದಲ್ಲಿ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2026’ನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.

ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ, ಕಳ್ಳಸಾಗಾಣಿಕೆದಾರರು, ಮರಗಳ್ಳರು ಹಾಗೂ ದಂತಚೋರರ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ಕರ್ನಾಟಕ ಅರಣ್ಯ ಇಲಾಖೆಯ 65 ಅಧಿಕಾರಿಗಳು ಹಾಗೂ ನೌಕರರನ್ನು ಗೌರವಪೂರ್ವಕವಾಗಿ ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ, ಮೂರು ಸುತ್ತು ಕುಶಲ ತೋಪು ಹಾರಿಸುವ ಕವಾಯತು, ರಾಷ್ಟ್ರಗೀತೆ ಹಾಗೂ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕೇವಲ ಇಲಾಖೆಯ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅತಿಥಿಗಳು ಕರೆ ನೀಡಿದರು. ಕಾರವಾರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ (ಐಎಎಸ್‌), ಜಿ.ಪಂ. ಸಿಇಒ ಡಾ. ದಿಲೀಪ್ ಶಶಿ (ಐಎಎಸ್‌), ನೌಕಾನೆಲೆಯ ರಜತ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಜಿ. ನಾವಿ, ಪ್ರಾದೇಶಿಕ ನಿರ್ದೇಶಕ ಪ್ರವೀಣ ಬಸ್ರೂರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಪೋಲಿಸ್ ಬ್ಯಾಂಡ್‌ನವರಿಂದ “Abide With Me” ಶೋಕಗೀತೆ ನುಡಿಸಲಾಯಿತು.

    About The Author

    error: Content is protected !!