ಗೋಕರ್ಣ: ಸೂರ್ಯೋದಯಕ್ಕೂ ಪೂರ್ವದಲ್ಲಿ ಪ್ರತಿದಿನವೂ ನಿಯಮಿತವಾಗಿ ನೀರನ್ನು ಸೇವಿಸುವ ‘ಉಷಃಪಾನ’ ಹಾಗೂ ಮೂಗಿನ ಮೂಲಕ ನೀರು ಸೇವಿಸುವ ‘ನಾಸಾಪಾನ’ ಪದ್ಧತಿಗಳನ್ನು ಅಳವಡಿಸಿಕೊಂಡರೆ ಮನುಷ್ಯನು ರೋಗ ಹಾಗೂ ಮುಪ್ಪುಗಳಿಲ್ಲದೆ ನೂರು ವರ್ಷಗಳ ಕಾಲ ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.










ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 16, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.
ಉಷಃಪಾನ ಹಾಗೂ ನಾಸಾಪಾನದ ಮಹತ್ವ: ಸೂರ್ಯೋದಯಕ್ಕೂ ಮುನ್ನ ಎದ್ದು ಶೌಚಕ್ರಿಯೆಗೂ ಮೊದಲೇ ತಾಮ್ರದ ಪಾತ್ರೆಯಲ್ಲಿ ಇರಿಸಿದ ಎಂಟು ಬೊಗಸೆ ನೀರನ್ನು ಸೇವಿಸುವುದನ್ನು ಉಷಃಪಾನ ಎನ್ನಲಾಗುತ್ತದೆ. ಇದರಿಂದ ಜಠರಾಗ್ನಿ ಪ್ರಜ್ವಲಿಸಿ ರೋಗಗಳು ನಿವಾರಣೆಯಾಗುತ್ತವೆ. ಇನ್ನು ಮೂಗಿನ ಹೊಳ್ಳೆಗಳ ಮೂಲಕ ಜಲ ನೇತಿ (ನಾಸಾಪಾನ) ಮಾಡುವುದರಿಂದ ಬುದ್ಧಿ ಚುರುಕಾಗಿ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ. ಇವು ಪುಸ್ತಕದ ಬದನೆಕಾಯಿಯಲ್ಲ, ಪ್ರತ್ಯಕ್ಷ ಆಚರಿಸಿ ಕಂಡುಕೊಂಡ ಸತ್ಯಗಳಾಗಿವೆ ಎಂದು ಶ್ರೀಗಳು ವಿವರಿಸಿದರು.
ಘನಪಾರಾಯಣಕ್ಕೆ ಚಾಲನೆ: ಚಾತುರ್ಮಾಸ್ಯದ ಅಂಗವಾಗಿ ವೇ.ಬ್ರ. ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳ ನೇತೃತ್ವದಲ್ಲಿ ನಾಡಿನ 10 ಪ್ರಮುಖ ಘನಪಾಠಿಗಳಿಂದ ಕೃಷ್ಣ ಯಜುರ್ವೇದದ ತೈತ್ತಿರೀಯ ಶಾಖೆಯ ‘ಘನಪಾರಾಯಣ’ಕ್ಕೆ ಚಾಲನೆ ದೊರೆಯಿತು. ಸೆಪ್ಟೆಂಬರ್ 23ರ ವರೆಗೆ ಈ ಕಠಿಣ ಹಾಗೂ ಶ್ರೇಷ್ಠ ವೇದ ಪಾರಾಯಣ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ನ ಎಂಡಿ ಹಾಗೂ ಸಿಇಒ ರಾಘವೇಂದ್ರ ಭಟ್, ವೇ.ಬ್ರ. ರವೀಶ್ ತಂತ್ರಿ, ಹಿರಿಯ ಸಾಹಿತಿ ಭುವನೇಶ್ವರೀ ಹೆಗಡೆ ಉಪಸ್ಥಿತರಿದ್ದು ಆಶೀರ್ವಾದ ಪಡೆದರು. ಶಿವರಾಮಚಂದ್ರ ಶಿವಾಲ ಕುಟುಂಬಸ್ಥರು ಗುರುಭಿಕ್ಷಾ ಸೇವೆ ಸಮರ್ಪಿಸಿದ್ದು, ರಾಜಾರಾಮ ಮರಿಗದ್ದೆ ದಂಪತಿಗಳು ದಿನಪ್ರಧಾನರಾಗಿ ಭಾಗವಹಿಸಿದ್ದರು.
About The Author


More Stories
ಅರಿವಿನ ಬದುಕಿಗೆ ದೇಸಿ ಗೋವಿನ ತುಪ್ಪ ಅಗತ್ಯ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಬಾಯಾರಿದವರಿಗೆ ನೀರು ನೀಡುವುದು ಶ್ರೇಷ್ಠ ಯಜ್ಞ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಪ್ಲಾಸ್ಟಿಕ್ ಮುಕ್ತ ಜೀವನಕ್ಕೆ ಪ್ರವಾಹಕ್ಕೆ ವಿರುದ್ಧ ಈಜುವ ಧೈರ್ಯ ಬೇಕು: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ