September 20, 2026

ಕರ್ನಾಟಕ ಸಂಘ ಕತಾರ್‌ನ ‘ಕನ್ನಡ ಪಾಠಶಾಲೆ’ಗೆ ಹೊಸ ಆಶಯ, ನೂತನ ಕಾಯಕಲ್ಪದೊಂದಿಗೆ ಪುನರಾರಂಭ

ದೋಹಾ (ಕತಾರ್): ವಿದೇಶದಲ್ಲಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯನ್ನು ತಲುಪಿಸುವ ಉದ್ದೇಶದಿಂದ ಕರ್ನಾಟಕ ಸಂಘ ಕತಾರ್ (KSQ) ನಡೆಸಿಕೊಂಡು ಬರುತ್ತಿರುವ ‘ಕನ್ನಡ ಪಾಠಶಾಲೆ’ಯನ್ನು ಹೊಸ ಆಶಯ ಹಾಗೂ ನೂತನ ಕಾಯಕಲ್ಪದೊಂದಿಗೆ ಪುನರಾರಂಭಿಸಲಾಗಿದೆ.

ಡಾ. ಪುರುಷೋತ್ತಮ ಬಿಳಿಮಲೆ ಅವರಿಂದ ತರಬೇತಿ: ಶಿಕ್ಷಕರು ಮತ್ತು ಪೋಷಕರಿಗಾಗಿ ಆಯೋಜಿಸಲಾಗಿದ್ದ ವಿಶೇಷ ತರಬೇತಿ ಕಾರ್ಯಾಗಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ನಡೆಸಿಕೊಟ್ಟರು. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಬೋಧಿಸುವ ವಿಧಾನಗಳು, ಪಠ್ಯಕ್ರಮ ಹಾಗೂ ಆಸಕ್ತಿದಾಯಕ ಬೋಧನಾ ತಂತ್ರಗಳ ಕುರಿತು ಅವರು ಮಾರ್ಗದರ್ಶನ ನೀಡಿದರು.

ಶಿಕ್ಷಕರ ದಿನಾಚರಣೆಯಲ್ಲಿ ಅಧಿಕೃತ ಚಾಲನೆ: ಸಂಘ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಳಿಮಲೆ ಅವರ ಸಮ್ಮುಖದಲ್ಲಿ ಪಾಠಶಾಲೆಯ ಪುನರಾರಂಭವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಕೊಡುಗೆಯನ್ನು ಈ ವೇಳೆ ಶ್ಲಾಘಿಸಲಾಯಿತು.

ಸಮಾನತೆಯ ಸಂಕೇತವಾಗಿ ಟಿ-ಶರ್ಟ್‌ ವಿತರಣೆ: ಶಶಿಧರ್ ಹೆಚ್. ಬಿ. ಸ್ವಾಗತಿಸಿದ ಸಭೆಯಲ್ಲಿ, ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ, ಮಾಜಿ ಅಧ್ಯಕ್ಷ ಎಚ್. ಕೆ. ಮಧು, ಉಪಾಧ್ಯಕ್ಷ ಅನಿಲ್ ಭಾಸಗಿ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮಕ್ಕಳಲ್ಲಿ ಒಗ್ಗಟ್ಟು ಮತ್ತು ಸಮಾನತೆ ಮೂಡಿಸಲು ಕೆಎಸ್‌ಕ್ಯೂ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಟಿ-ಶರ್ಟ್‌ಗಳು ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ತರಗತಿಗಳು ಪ್ರತೀ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಮಕ್ಕಳ ಕಲಿಕಾ ಮಟ್ಟಕ್ಕೆ ತಕ್ಕಂತೆ ಮೂರು ಹಂತಗಳಲ್ಲಿ ನಡೆಯಲಿದ್ದು, ಪ್ರವಾಸಿ ಕನ್ನಡಿಗರು ತಮ್ಮ ಮಕ್ಕಳನ್ನು ಪಾಠಶಾಲೆಗೆ ದಾಖಲಿಸುವಂತೆ ಆಡಳಿತ ಮಂಡಳಿ ಕೋರಿದೆ.

About The Author

error: Content is protected !!