September 20, 2026

ಅರಿವಿನ ಬದುಕಿಗೆ ದೇಸಿ ಗೋವಿನ ತುಪ್ಪ ಅಗತ್ಯ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ

ಗೋಕರ್ಣ: ಮನುಷ್ಯ ಬದುಕಲು ನೀರು ಎಷ್ಟು ಮುಖ್ಯವೋ, ಆ ಬದುಕು ಸಾರ್ಥಕವಾಗಲು ಗೋವಿನ ತುಪ್ಪವೂ ಅಷ್ಟೇ ಅಗತ್ಯ. ಕ್ರಿಮಿ ಕೀಟಗಳ ಮಟ್ಟದಿಂದ ಮೇಲೆದ್ದು ಅರಿವಿನ ಬದುಕನ್ನು ಕಟ್ಟಿಕೊಳ್ಳಲು ಗೋವಿನ ತುಪ್ಪದ ಪಾತ್ರ ಹಿರಿದಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 19, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ‘ತುಪ್ಪದ ಮಹತ್ವ’ದ ಕುರಿತು ಪ್ರವಚನ ನೀಡಿದರು.

ದೇಸಿ ಗೋವಿನ ತುಪ್ಪದ ಹಿರಿಮೆ: ಗೋವು ಸೃಷ್ಟಿಯ ಸಾರವಾದರೆ, ಹಾಲು ಗೋವಿನ ಸಾರ ಹಾಗೂ ತುಪ್ಪ ಸಾರಗಳ ಸಾರವಾಗಿದೆ. ದೇಶಿ ತಳಿಯ (A2) ಹಾಲಿನಿಂದ ತಯಾರಿಸಿದ ತುಪ್ಪ ಮಾತ್ರವೇ ನಿಜವಾದ ತುಪ್ಪ. ಕಾಲ ಕಳೆದಂತೆ ಎಲ್ಲ ವಸ್ತುಗಳ ಗುಣ ಕ್ಷೀಣಿಸಿದರೆ, ತುಪ್ಪದ ಔಷಧೀಯ ಗುಣ ಹೆಚ್ಚಾಗುತ್ತದೆ. ಆಯುರ್ವೇದದಲ್ಲಿ ನೂರು ವರ್ಷ ಹಳೆಯ ತುಪ್ಪವನ್ನು ‘ಮಹಾ ಔಷಧ’ ಎಂದು ಕರೆಯಲಾಗಿದೆ.

ಆಹಾರ ದೋಷ ನಿವಾರಕ: ಆಹಾರದಲ್ಲಿರುವ ದೋಷಗಳನ್ನು ಕಳೆಯುವ ಮತ್ತು ಔಷಧದ ಗುಣವನ್ನು ಹೆಚ್ಚಿಸುವ ಸಾಮರ್ಥ್ಯ ತುಪ್ಪಕ್ಕಿದೆ. ಯಜ್ಞಾದಿ ಕಾರ್ಯಗಳಲ್ಲೂ ತುಪ್ಪದ ಸಂಸರ್ಗ ಅತ್ಯಗತ್ಯ. ಸುಶ್ರುತ ಸಂಹಿತೆಯಲ್ಲಿ ನೀರಿನ ನಂತರ ತುಪ್ಪಕ್ಕೆ ಅಗ್ರಸ್ಥಾನ ನೀಡಿದ್ದರೂ, ಇಂದು ತುಪ್ಪ ಆರೋಗ್ಯಕ್ಕೆ ಕೆಟ್ಟದ್ದು ಎಂಬ ಅಪಪ್ರಚಾರ ನಡೆಯುತ್ತಿರುವುದಕ್ಕೆ ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಊಟದ ನಿಯಮ: ಊಟವು ತುಪ್ಪದಿಂದ ಆರಂಭವಾಗಬೇಕೇ ಹೊರತು ಉಪ್ಪಿನಕಾಯಿಯಿಂದಲ್ಲ. ಆಯುರ್ವೇದದ ಈ ನಿಯಮವನ್ನು ಬಿಟ್ಟು ಉಪ್ಪಿನಕಾಯಿಯಿಂದ ಊಟ ಆರಂಭಿಸಿದರೆ ಆಹಾರ ಪದ್ಧತಿಯ ವ್ಯವಸ್ಥೆಯೇ ಬುಡಮೇಲಾದಂತೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದಲ್ಲಿ ಭಾರತ ಮಂಡಲದ ಪ್ರಮುಖ ವಲಯಗಳ ಪರವಾಗಿ ಗಜಾನನ ಭಾಗ್ವತ್ ಕುಟುಂಬಸ್ಥರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಕೃಷ್ಣ ಕಳಂಜಿ, ಆರ್. ಜಿ. ಭಟ್, ಡಾ. ಶಾರದಾ ಜಯಗೋವಿಂದ ಹಾಗೂ ದಿನಪ್ರಧಾನರಾಗಿ ದತ್ತರಾಜ್ ಮಂಚಾಲೆ ದಂಪತಿಗಳು ಉಪಸ್ಥಿತರಿದ್ದು ಆಶೀರ್ವಾದ ಪಡೆದರು.

    About The Author

    error: Content is protected !!