September 22, 2026

‘ಕಣ್ಣಾಮುಚ್ಚಾಲೆ’ ಆಟ: ಜಿ-ಮಾರ್ಟ್ ಎದುರು ಅರ್ಧಕ್ಕೇ ನಿಂತ ಶೌಚಾಲಯ, ಮಹಿಳೆಯರ ಪರದಾಟ

ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಣಿಗಿ ಕಾಂಪ್ಲೆಕ್ಸ್ ಹಿಂಭಾಗದ ಜಿ-ಮಾರ್ಟ್ ಎದುರು ನಿರ್ಮಿಸಲಾಗುತ್ತಿದ್ದ ಸಾರ್ವಜನಿಕ ಶೌಚಾಲಯ ಕಾಮಗಾರಿ ಅರ್ಧಕ್ಕೇ ನಿಂತು ತಿಂಗಳುಗಳು ಕಳೆದರೂ ಪೂರ್ಣಗೊಳಿಸದೇ ಇರುವುದು ಆಡಳಿತ ಯಂತ್ರದ ಉದಾಶೀನತೆಗೆ ಹಿಡಿದ ಕನ್ನಡಿಯಾಗಿದೆ.

ಸ್ಥಗಿತಗೊಂಡ ಕಾಮಗಾರಿ ಹಾಗೂ ಅನುಮಾನ: ಶೌಚಾಲಯದ ನಾಲ್ಕೂ ಗೋಡೆಗಳನ್ನು ಎತ್ತಿ ಚಾವಣಿ ಹಾಕುವ ಹಂತದಲ್ಲಿ ಕೆಲಸವನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕೋರ್ಟ್ ತಡೆಯಾಜ್ಞೆಯಿದೆಯೋ, ಸ್ಥಳೀಯ ಪ್ರಭಾವಿ ಶಕ್ತಿಗಳ ಒತ್ತಡವಿದೆಯೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯವಿದೆಯೋ ಎಂಬುದನ್ನು ಅಥಣಿ ಪುರಸಭೆ ಸ್ಪಷ್ಟಪಡಿಸಬೇಕಿದೆ. ಪುರಸಭೆ, ತಾಲೂಕು ಆಡಳಿತ, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮಹಿಳೆಯರಿಗೆ ಯಾತನೆ ಹಾಗೂ ಆರೋಗ್ಯಕ್ಕೆ ಕಂಟಕ: ಮಾರುಕಟ್ಟೆಗೆ ಬರುವ ನೂರಾರು ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಸ್ಥಳೀಯ ವ್ಯಾಪಾರಿಗಳು ಶೌಚಾಲಯವಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಚಾವಣಿಯಿಲ್ಲದೆ ಅರ್ಧಕ್ಕೇ ನಿಂತ ಜಾಗವು ಅನೈರ್ಮಲ್ಯದ ಗೂಡಾಗಿದ್ದು, ಗಬ್ಬು ವಾಸನೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಮನವಿ ಹಾಗೂ ಆಗ್ರಹ: ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುವುದನ್ನು ತಡೆದು, ಯಾವುದೇ ಹಿತಾಸಕ್ತಿಗಳ ಒತ್ತಡಕ್ಕೆ ಮಣಿಯದೇ ತಕ್ಷಣವೇ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.) ಆಗ್ರಹಿಸಿದೆ.

    (ವಿಶೇಷ ವರದಿ: ಮಹೇಶ್ ಶರ್ಮಾ, )

    About The Author

    error: Content is protected !!