October 22, 2026

ಮುರಿನಕಟ್ಟೆ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಹೆಸರು ಸೇರ್ಪಡೆ ಖಂಡಿಸಿ ಶ್ರೀಕಾಂತ ನಾಯ್ಕ್ ಆಕ್ಷೇಪ

ಭಟ್ಕಳ: ಮುರಿನಕಟ್ಟೆ ಧ್ವಂಸ ಹಾಗೂ ಬಳಿಕ ನಡೆದ ಬೆಳವಣಿಗೆಗಳಿಗೆ ಸಂಬಂಧಿಸಿದ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿರುವುದನ್ನು ಖಂಡಿಸಿ, ಎಲ್ಲರಿಗೂ ಸಮಾನವಾಗಿ ಕಾನೂನು ಅನ್ವಯವಾಗಬೇಕೆಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾರಾಯಣ ನಾಯ್ಕ್ ಆಗ್ರಹಿಸಿದ್ದಾರೆ.

ಆಸರಕೇರಿ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದ್ವಂದ್ವ ನೀತಿ ಆರೋಪ: ಮುರಿನಕಟ್ಟೆ ಘಟನೆಗೆ ಸಂಬಂಧಿಸಿ ತಮ್ಮ ಕಡೆಯ 20-25 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, 17 ಮಂದಿ ಪ್ರಕರಣ ಎದುರಿಸುತ್ತಿದ್ದಾರೆ. ಪೊಲೀಸರು “ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ” ಎಂಬಂತೆ ದ್ವಂದ್ವ ನೀತಿ ಅನುಸರಿಸದೆ, ವಿಡಿಯೋ ಸಾಕ್ಷ್ಯಗಳ ಆಧಾರದಲ್ಲಿ ಘಟನೆಯಲ್ಲಿದ್ದ ಇತರ ಮುಖಂಡರ ವಿರುದ್ಧವೂ ಕ್ರಮ ಕೈಗೊಳ್ಳಬೇಕು.

ಚಾರ್ಜ್‌ಶೀಟ್ ಆಕ್ಷೇಪ: ಎಫ್‌ಐಆರ್‌ನಲ್ಲಿ ತಮ್ಮ ಹೆಸರಿಲ್ಲದಿದ್ದರೂ ಚಾರ್ಜ್‌ಶೀಟ್ ಸಲ್ಲಿಸುವಾಗ ಹೆಸರು ಸೇರ್ಪಡೆ ಮಾಡಲಾಗಿದೆ. ತಮ್ಮ ಹೆಸರು ಸೇರ್ಪಡೆಗೆ ಆಕ್ಷೇಪವಿಲ್ಲ, ಆದರೆ ಪ್ರಕರಣದಲ್ಲಿದ್ದ ಪ್ರತಿಯೊಬ್ಬರ ಪಾತ್ರವನ್ನೂ ತನಿಖೆಗೊಳಪಡಿಸಬೇಕು.

ರಾಜಕೀಯ ಒತ್ತಡದ ದೂರು: ಕಾಶ್ಮೀರಿ ಫೈಲ್ಸ್ ಚಿತ್ರ ಪ್ರದರ್ಶನ, ವೀರ ಸಾವರ್ಕರ್ ಪ್ರತಿಮೆ ಸೇರಿದಂತೆ ತಮ್ಮ ಮೇಲಿದ್ದ ಹಲವು ಪ್ರಕರಣಗಳು ರಾಜಕೀಯ ಒತ್ತಡದಿಂದ ದಾಖಲಾಗಿದ್ದು, ಲಿಖಿತ ಮನವಿ ನೀಡಿದ್ದರೂ ಈವರೆಗೆ ‘ಬಿ-ರಿಪೋರ್ಟ್’ ಸಲ್ಲಿಸಿಲ್ಲ ಎಂದು ತಿಳಿಸಿದರು.

ಹೋರಾಟ ಮುಂದುವರಿಕೆ: “14 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಎಷ್ಟೇ ಪ್ರಕರಣಗಳು ದಾಖಲಾದರೂ ಸಂಘಟನೆ ಹಾಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಮಾತನಾಡಿ, “ಶ್ರೀಕಾಂತ ನಾಯ್ಕ್ ಅವರನ್ನು ಮಾತ್ರ ಗುರಿಯಾಗಿಸಲಾಗುತ್ತಿದೆಯೇ ಎಂಬ ಸಂಶಯವಿದೆ. ಪ್ರಕರಣಗಳು ಎಷ್ಟೇ ಬಂದರೂ ಕಾನೂನುಬದ್ಧವಾಗಿ ಎದುರಿಸಲು ಸಿದ್ಧ,” ಎಂದರು.

ಮೇ 24ರಂದು ನಡೆದ ಮುರಿನಕಟ್ಟೆ ಧ್ವಂಸ ಘಟನೆಯ ನಂತರ ಭಟ್ಕಳದಲ್ಲಿ ಬಂದ್ ಹಾಗೂ ಪ್ರತಿಭಟನೆಗಳು ನಡೆದಿದ್ದು, ಬಳಿಕ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಎರಡೂ ಸಮುದಾಯಗಳ ನಡುವೆ ಮುರಿನಕಟ್ಟೆ ಮರುನಿರ್ಮಾಣಕ್ಕೆ ಸಂಬಂಧಿಸಿದಂತೆ ಒಮ್ಮತದ ನಿರ್ಧಾರ ಮೂಡಿತ್ತು.

    About The Author

    error: Content is protected !!