ವಿರಾಜಪೇಟೆ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಂತ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿಗಳಲ್ಲಿ ಒಂದಾದ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ಗೆ (2026-27ನೇ ಸಾಲಿಗೆ) ಸಾಹಿತಿ ಹಾಗೂ ಸಂಶೋಧಕಿ ಡಾ. ಕೆ.ಪಿ. ಲಲಿತ (ರಶ್ಮಿ ನಂಜಪ್ಪ ಕಳ್ಳಿಚಂಡ) ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಯು ಭಾಜನವಾಗಿದೆ.
ಕೊಡಗಿನ ಮಹಿಳಾ ಲೇಖಕಿಯರು ಪ್ರಕಟಿಸುವ ಉತ್ತಮ ಸಾಹಿತ್ಯ ಕೃತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗೌರಮ್ಮ ಅವರ ಪುತ್ರ ಬಿ.ಜಿ. ವಸಂತ ಅವರು ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಈ ಬಾರಿಯ 24ನೇ ಪ್ರಶಸ್ತಿಗಾಗಿ ಒಟ್ಟು 9 ಲೇಖಕಿಯರ ಕೃತಿಗಳು ಸಲ್ಲಿಕೆಯಾಗಿದ್ದವು. ಜಿಲ್ಲೆಯ ಮೂವರು ಹಿರಿಯ ಸಾಹಿತಿಗಳನ್ನು ಒಳಗೊಂಡ ತೀರ್ಪುಗಾರರ ಮೌಲ್ಯಮಾಪನದಲ್ಲಿ ಅತ್ಯಧಿಕ ಅಂಕ ಗಳಿಸುವ ಮೂಲಕ ಡಾ. ಕೆ.ಪಿ. ಲಲಿತ ಅವರ ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ.
ಸಾಧಕಿ ಡಾ. ಕೆ.ಪಿ. ಲಲಿತ ಅವರ ಕಿರು ಪರಿಚಯ:
ಪ್ರಾಥಮಿಕ ಶಿಕ್ಷಣವನ್ನು ಕೊಡಗಿನಲ್ಲಿ ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಿಂದ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯೊಂದಿಗೆ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೊಡಗಿನ ಸ್ಥಳನಾಮಗಳ ಕುರಿತ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಗೌರವ ಲಭಿಸಿದೆ.

ಪ್ರಮುಖ ಕೃತಿಗಳು: ‘ವಿವಕ್ಷ’, ‘ವಿವೇಚನೆ’, ‘ಜೀವಂತ ಪಳೆಯುಳಿಕೆಗಳ ಕುರಿತು’, ‘ಕೊಡಗಿನ ಭಾಷೆ ಮತ್ತು ಸಂಸ್ಕೃತಿ’, ‘ಕೊಡಗಿನ ಜನಪದ ಕಥೆಗಳು’, ‘ಶೋಧನೆಯ ಹಾದಿಯಲ್ಲಿ’ ಸೇರಿದಂತೆ ಹಲವು ಮೌಲ್ಯಯುತ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ.
ಸಾಧನೆ: ಅಂತರರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ 29 ಸಂಶೋಧನಾ ಲೇಖನಗಳು ಪ್ರಕಟವಾಗಿದ್ದು, ಭಾರತ ಸರ್ಕಾರದ ನೀತಿ ಆಯೋಗ ನೀಡುವ ‘ಅಬ್ದುಲ್ ಕಲಾಮ್ ರಾಷ್ಟ್ರ ಪ್ರಶಸ್ತಿ’ಗೂ ಇವರು ಭಾಜನರಾಗಿದ್ದಾರೆ.
(ವರದಿ: ಪ್ರಿತುನ್ ಪೂವಣ್ಣ)
About The Author


More Stories
ಜನಮನ ಸೆಳೆದ ಗೋಣಿಕೊಪ್ಪದ ೧೧ನೇ ವರ್ಷದ ಶ್ರೀ ಕಾವೇರಿ ಮಹಿಳಾ ದಸರಾ
ಕೊಯನಾಡು ರಬ್ಬರ್ ಎಸ್ಟೇಟ್ ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ಪೊನ್ನಣ್ಣ ವಿಶೇಷ ಅನುದಾನದಿಂದ ಕಾಂಕ್ರೀಟೀಕರಣ
ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಪೂವಮ್ಮರಿಗೆ ಸಂಸದ ಯದುವೀರ್ ಒಡೆಯರ್ ಅಭಿನಂದನೆ