ದಾವಣಗೆರೆ: ಭಾರತ ದೇಶವು ಕೇವಲ ಒಂದೇ ರಾಷ್ಟ್ರವಲ್ಲ, ಅದು ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರ ಹಾಗೂ ವಿವಿಧ ಜೀವನ ವಿಧಾನಗಳನ್ನು ಒಳಗೊಂಡಿರುವ ಹಲವು ರಾಷ್ಟ್ರೀಯತೆಗಳ ಬೃಹತ್ ಒಕ್ಕೂಟವಾಗಿದೆ ಎಂದು ಬಂಡಾಯ ಸಾಹಿತಿ ಡಾ. ಸಿದ್ದನಗೌಡ ಪಾಟೀಲ ಅಭಿಪ್ರಾಯಪಟ್ಟರು.
ನಗರದ ‘ಬೆಳಕು’ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ‘ಬೃಹತ್ ಭಾರತದ ಸಾಮಾಜಿಕ ಆಯಾಮಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವೈವಿಧ್ಯತೆಯೇ ಭಾರತದ ಶಕ್ತಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಪಂಜಾಬ್ನಿಂದ ಅರುಣಾಚಲ ಪ್ರದೇಶದವರೆಗೆ ವಿಸ್ತರಿಸಿರುವ ಈ ದೇಶದಲ್ಲಿ ವಿವಿಧ ಭಾಷೆ, ಜಾತಿ, ಧರ್ಮ ಮತ್ತು ಆಹಾರ ಪದ್ಧತಿಗಳು ಒಂದೇ ಭೌಗೋಳಿಕ ಗೆರೆಯೊಳಗೆ ಸಾಮರಸ್ಯದಿಂದ ಇರುವುದೇ ನಿಜವಾದ ಶಕ್ತಿಯಾಗಿದೆ ಎಂದರು.
ಪ್ರಜಾಸತ್ತಾತ್ಮಕ ಒಕ್ಕೂಟ ರಚನೆ: ಸ್ವಾತಂತ್ರ್ಯಾನಂತರ ದೇಶವನ್ನು ಧರ್ಮಾಧಾರಿತ ರಾಷ್ಟ್ರವನ್ನಾಗಿ ಮಾಡಲು ಒತ್ತಡಗಳಿದ್ದರೂ, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸರ್ವಧರ್ಮೀಯರ ಹಿತದೃಷ್ಟಿಯಿಂದ ಪ್ರಜಾಸತ್ತಾತ್ಮಕ ಒಕ್ಕೂಟವನ್ನಾಗಿ ನಿರ್ಧರಿಸಲಾಯಿತು ಎಂದು ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಸ್ಮರಿಸಿದರು.

ಜನಸಾಮಾನ್ಯರ ಹೋರಾಟದ ಫಲ: ಸ್ವಾತಂತ್ರ್ಯದ ವೇಳೆ ಪ್ರತ್ಯೇಕವಾಗಿ ಉಳಿಯಲು ಬಯಸಿದ್ದ 500ಕ್ಕೂ ಹೆಚ್ಚು ಸಂಸ್ಥಾನಗಳು ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಗಲು ಜನಸಾಮಾನ್ಯರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಹೋರಾಟವೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ್, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ. ಎ. ಬಿ. ರಾಮಚಂದ್ರಪ್ಪ, ‘ಬೆಳಕು’ ಸಂಸ್ಥೆಯ ಉಪಾಧ್ಯಕ್ಷ ಪಿ. ಆರ್. ಶಾಹು, ನಿವೃತ್ತ ಅಪರ ಜಿಲ್ಲಾಧಿಕಾರಿ ರುದ್ರಪ್ಪ ಹನಗವಾಡಿ, ಸಂದೀಪ್ ಐಹೊಳೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
About The Author


More Stories