October 22, 2026

ನಾಣಿಕಟ್ಟಾ ಯಕ್ಷಹಬ್ಬ: ಅಕ್ಟೋಬರ್ 11ರಂದು ಅದ್ದೂರಿ ‘ವಾಲಿಮೋಕ್ಷ-ವೀರ ಬರ್ಬರೀಕ’ ಯಕ್ಷಗಾನ ಪ್ರದರ್ಶನ

ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದಿ. ಚಿಟ್ಟಾಣಿ ವೇದಿಕೆಯಲ್ಲಿ ಅಕ್ಟೋಬರ್ 11ರ ಭಾನುವಾರ ರಾತ್ರಿ 8:01ಕ್ಕೆ 97ನೇ ಹೆಜ್ಜೆಯ ‘ನಾಣಿಕಟ್ಟಾ ಯಕ್ಷಹಬ್ಬ’ದ ಅಂಗವಾಗಿ ‘ವಾಲಿಮೋಕ್ಷ-ವೀರ ಬರ್ಬರೀಕ’ ಅಪ್ಪಟ ಪೌರಾಣಿಕ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ ಹಾಗೂ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ) ಸಿದ್ದಾಪುರ-ಉಡುಪಿ ಇವರ ಜಂಟಿ ಸಂಯೋಜನೆಯಲ್ಲಿ, ವೇದಮೂರ್ತಿ ವಿನಾಯಕ ಸು. ಭಟ್ಟ ಮತ್ತೀಹಳ್ಳಿ ಅವರ ಗೌರವ ಉಪಸ್ಥಿತಿಯಲ್ಲಿ ಈ ಯಕ್ಷಪರ್ವ ಜರುಗಲಿದೆ.

ದಿಗ್ಗಜ ಕಲಾವಿದರ ಸಂಗಮ:

ಹಿಮ್ಮೇಳ: ಭಾಗವತರಾಗಿ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ, ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀ ದರ್ಶನ ಗೌಡ ಗೋಳಿಹೊಳೆ ಹಾಗೂ ಮದ್ದಳೆಯಲ್ಲಿ ಶ್ರೀ ಸುನೀಲ್ ಭಂಡಾರಿ ಕಡತೋಕಾ, ಶ್ರೀ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ, ಶ್ರೀ ಪ್ರಸನ್ನ ಹೆಗ್ಗಾರ, ಶ್ರೀ ಸುಜನ ಹಾಲಾಡಿ ಭಾಗವಹಿಸಲಿದ್ದಾರೆ.

ಮುಮ್ಮೇಳ: ಶ್ರೀ ಅಶೋಕ ಭಟ್ ಸಿದ್ದಾಪುರ, ಶ್ರೀ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ಶ್ರೀ ವಿದ್ಯಾಧರ ರಾವ್ ಜಲವಳ್ಳಿ, ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಶ್ರೀ ಶಂಕರ ಹೆಗಡೆ ನಿಲ್ಕೋಡ್, ಶ್ರೀ ಉದಯ ಹೆಗಡೆ ಕಡಬಾಳ, ಶ್ರೀ ಕಾರ್ತಿಕ್ ಹೆಗಡೆ ಚಿಟ್ಟಾಣಿ, ಶ್ರೀ ರವೀಂದ್ರ ದೇವಾಡಿಗ, ಶ್ರೀ ಸುಧೀರ್ ಸರ್ವೇಗಾರ ಉಪ್ಪೂರು ಸೇರಿದಂತೆ ನಾಡಿನ ಸುಪ್ರಸಿದ್ಧ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

    ಸಾಧಕರಿಗೆ ಗೌರವ ಸಮರ್ಪಣೆ: ಕಾರ್ಯಕ್ರಮದಲ್ಲಿ ಯಕ್ಷಗಾನದ ಸುಪ್ರಸಿದ್ಧ ಸ್ತ್ರೀ ಪಾತ್ರಧಾರಿ ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಹಾಗೂ ಸುಪ್ರಸಿದ್ಧ ಹಾಸ್ಯಗಾರ ಶ್ರೀ ರವೀಂದ್ರ ದೇವಾಡಿಗ ಅವರಿಗೆ ‘ಗೌರವ ಸಮರ್ಪಣೆ’ ನೆರವೇರಲಿದೆ. ಜೊತೆಗೆ, ಜನ್ಮದಿನದ ಸಂಭ್ರಮದಲ್ಲಿರುವ ಶ್ರೀ ವಿದ್ಯಾಧರ ರಾವ್ ಜಲವಳ್ಳಿ ಅವರಿಗೆ ‘ಜನ್ಮದಿನದ ಕಲಾಗೌರವ’ ಹಾಗೂ ಅಗ್ರಮಾನ್ಯ ಭಾಗವತರಾದ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಅವರಿಗೆ ‘ಹಿಮ್ಮೇಳ ಕಲಾ ಗೌರವ’ ಸಮರ್ಪಿಸಲಾಗುವುದು.

    ಮಳೆಯ ವಾತಾವರಣವಿರುವುದರಿಂದ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಮೇಲ್ಛಾವಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಮನವಿ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖ್ಯಸ್ಥರಾದ ನಟರಾಜ ಎಂ. ಹೆಗಡೆ, ರಮೇಶ್ ಟಿ. ನಾಯ್ಕ್, ಉಮೇಶ್ ಗ. ಹೆಗಡೆ, ಕೌಶಿಕ ನಾ. ಹೆಗಡೆ, ಹರೀಶ್ ರಾ. ನಾಯ್ಕ್, ರವಿಕುಮಾರ್ ನಾ. ನಾಯ್ಕ್, ಮಂಜುನಾಥ ಮಾ. ಗೌಡ, ರಾಮಕೃಷ್ಣ ಮಾ. ಭಟ್, ವಿನಾಯಕ ಆಚಾರ ಹಾಗೂ ಪುನೀತ್ ನ. ನಾಯ್ಕ್ ಉಪಸ್ಥಿತರಿದ್ದರು.

    ವರದಿ: ಭಾವನಾ ಟಿವಿ ಡೆಸ್ಕ್

    About The Author

    error: Content is protected !!