October 22, 2026

ಸಿದ್ದಾಪುರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಬಿಜೆಪಿ ಒತ್ತಾಯ: 15 ದಿನಗಳ ಗಡುವು, ಉಗ್ರ ಹೋರಾಟದ ಎಚ್ಚರಿಕೆ

ಸಿದ್ದಾಪುರ: ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ತಕ್ಷಣವೇ ಘೋಷಿಸಬೇಕು ಹಾಗೂ ಬೆಳೆ ಹಾನಿಗೊಳಗಾದ ರೈತರಿಗೆ ಎಕರೆಗೆ ₹25,000 ನಷ್ಟ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತ್ ಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.

ಮಳೆ ಕೊರತೆಯಿಂದ ಕಂಗಾಲಾಗಿರುವ ಸಿದ್ದಾಪುರ ತಾಲೂಕಿನ ಶಿರಳಗಿ ಭಾಗದ ಬೆಳೆ ಹಾನಿ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

15 ದಿನಗಳ ಗಡುವು: “ರಾಜ್ಯ ಸರ್ಕಾರವು ಸಿದ್ದಾಪುರ ತಾಲೂಕಿನ ವಿಷಯದಲ್ಲಿ ಮಲತಾಯಿ ಧೋರಣೆ ಕೈಬಿಡಬೇಕು. 15 ದಿನಗಳ ಒಳಗಾಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಎಕರೆಗೆ ₹25,000 ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು” ಎಂದು ಅನಂತ್ ಮೂರ್ತಿ ಹೆಗಡೆ ಎಚ್ಚರಿಸಿದರು.

ಶೇ 90ರಷ್ಟು ಭತ್ತ ಸಂಪೂರ್ಣ ನಾಶ: ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಮಾತನಾಡಿ, “ಈ ಭಾಗದಲ್ಲಿ ಶೇ 90ರಷ್ಟು ಜನರು ಭತ್ತದ ಬೆಳೆಯನ್ನೇ ಅವಲಂಬಿಸಿದ್ದಾರೆ. ಮಳೆ ಇಲ್ಲದೆ ನೆಟ್ಟ ಗದ್ದೆಗಳು ಸಂಪೂರ್ಣ ಒಣಗಿಹೋಗಿದ್ದು, ನೀರಿಲ್ಲದೆ ತೆನೆಗಳು ಜೋಳ್ಳಾಗಿವೆ. ಬೋರ್‌ವೆಲ್ ನೀರು ಹಾಯಿಸಿದರೂ ವಿಪರೀತ ಬಿಸಿಲಿಗೆ ಆರಿಹೋಗುತ್ತಿದೆ. ಇನ್ನೊಂದೆಡೆ ಅಡಿಕೆ ಬೆಳೆಯೂ ಎಲೆ ಚುಕ್ಕಿ ರೋಗಕ್ಕೆ ಬಲಿಯಾಗುತ್ತಿದೆ. ಶಾಸಕ ಭೀಮಣ್ಣ ನಾಯಕ್ ಅವರು ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸರ್ವೆ ಮಾಡಿಸಿ, ಸಣ್ಣ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು” ಎಂದು ಒತ್ತಾಯಿಸಿದರು.

ರೈತ ಮೋರ್ಚಾ ತಾಲೂಕಾಧ್ಯಕ್ಷ ನಾರಾಯಣ ಹೆಗಡೆ ಹಾಗೂ ಯುವ ಮೋರ್ಚಾ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ, ರೈತರು ಈಗಾಗಲೇ ಸಂಕಷ್ಟದಲ್ಲಿದ್ದು, ಸರ್ಕಾರ ತಕ್ಷಣವೇ ಸ್ಪಂದಿಸದಿದ್ದರೆ ಬೃಹತ್ ರೈತ ಹೋರಾಟ ನಡೆಸಲಾಗುವುದು ಎಂದರು.

ಸರ್ಕಾರ ಹಾಗೂ ಶಾಸಕರ ವಿರುದ್ಧ ಆಕ್ರೋಶ: ಶಿರಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ ಶಿರಳಗಿ ಮಾತನಾಡಿ, “ಕ್ಷೇತ್ರವನ್ನು ಸಿಂಗಾಪುರ ಮಾಡುತ್ತೇವೆ ಎಂದಿದ್ದ ಶಾಸಕರು, ಹಳ್ಳಿಯ ರಸ್ತೆಗಳನ್ನು ಸ್ವಿಮ್ಮಿಂಗ್ ಪೂಲ್‌ನಂತೆ ಮಾಡಿದ್ದಾರೆ. ಕಳೆದ 3 ವರ್ಷಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕರ ಆಡಳಿತಕ್ಕೆ ಜನರು ಬೇಸತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಮಂಜುನಾಥ್ ಭಟ್, ಸುರೇಶ ಬಾಲಿಕೊಪ್ಪ, ಶ್ರೀಕಾಂತ್ ಭಟ್, ಎಸ್.ಕೆ. ನಾಯ್ಕ್, ಮುನಾವರ್, ಸುರೇಂದ್ರ ಗೌಡ, ಸಿ.ಆರ್. ನಾಯ್ಕ್ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.

ವರದಿ: ಭಾವನಾ ಟಿವಿ ಡೆಸ್ಕ್

About The Author

error: Content is protected !!