
ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ದುರ್ಘಟನೆ; ಅಂಡರ್‌ಪಾಸ್, ಸಿಗ್ನಲ್ ಅಳವಡಿಕೆಗೆ ಸ್ಥಳೀಯರ ತೀವ್ರ ಆಗ್ರಹ
ಭಟ್ಕಳ: ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಸ್ಕೂಟರ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಟ್ಕಳದ ಉಸ್ಮಾನ್ ನಗರ ಎರಡನೇ ಕ್ರಾಸ್ ಸಮೀಪ ಶನಿವಾರ ನಡೆದಿದೆ.

ಮೃತರನ್ನು ಗುಲ್ಮಿಯ ನಿವಾಸಿ, ವೃತ್ತಿಯಲ್ಲಿ ಟೈಲರ್ ಆಗಿದ್ದ ಮೊಹಮ್ಮದ್ ಖಾಸಿಂ (೬೦) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಮೊಹಮ್ಮದ್ ಖಾಸಿಂ ಅವರು ಭಟ್ಕಳ ಹಳೆ ಬಸ್ ನಿಲ್ದಾಣ ಸಮೀಪದ ತಮ್ಮ ಅಂಗಡಿಯನ್ನು ಮುಚ್ಚಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಿದ್ವಾಯಿ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ದಾಟಿ ಗುಲ್ಮಿಯತ್ತ ಸಾಗುತ್ತಿದ್ದಾಗ, ಮಂಗಳೂರು ಕಡೆಯಿಂದ ಹೊನ್ನಾವರದತ್ತ ತೆರಳುತ್ತಿದ್ದ ಕಂಟೇನರ್ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಂಟೇನರ್ ಚಕ್ರಕ್ಕೆ ಸಿಲುಕಿದ ಖಾಸಿಂ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಭಟ್ಕಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.
ಸುರಕ್ಷತೆಯಿಲ್ಲದ ಹೆದ್ದಾರಿ; ಸಾರ್ವಜನಿಕರ ಆಕ್ರೋಶ: ಈ ದುರ್ಘಟನೆಯ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿದ್ವಾಯಿ ರಸ್ತೆಯಿಂದ ಗುಲ್ಮಿ ಹಾಗೂ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಜಂಕ್ಷನ್‌ನಲ್ಲಿ ಸಿಗ್ನಲ್ ಲೈಟ್ ಅಥವಾ ಸೂಚನಾ ಫಲಕಗಳಿಲ್ಲದಿರುವುದೇ ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮತ್ತೊಂದು ಜೀವ ಬಲಿಯಾಗುವ ಮುನ್ನವೇ ಗುಲ್ಮಿ ಹಾಗೂ ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ತಕ್ಷಣ ಅಂಡರ್‌ಪಾಸ್ ನಿರ್ಮಿಸಬೇಕು ಮತ್ತು ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಬೇಕೆಂದು ಸ್ಥಳೀಯರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

More Stories
ಆನಂತವಾಡಿ ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ರೈಲಿನಿಂದ ಬಿದ್ದು ಸಾವು ಶಂಕೆ
ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಬಿ.ವಿ. ರಾಹುಲ್ಗೆ ಚಿನ್ನದ ಪದಕ; ರಾಷ್ಟ್ರ ಮಟ್ಟಕ್ಕೆ ಆಯ್ಕೆ
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು