೭೧ನೇ ರಾಜ್ಯೋತ್ಸವದ ಸಂದರ್ಭದಲ್ಲಾದರೂ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರಕ್ಕೆ ಆಗ್ರಹ
ಜನಪ್ರತಿನಿಧಿಗಳು ಒಂದು ತಿಂಗಳ ವೇತನ ನೀಡಿದರೆ ರೈತರ ಸಂಪೂರ್ಣ ಸಾಲಮನ್ನಾ ಸಾಧ್ಯ: ವಿಶೇಷ ಸಲಹೆ

ಅಥಣಿ: “ಒಂದೆಡೆ ರಾಜ್ಯಾದ್ಯಂತ ೭೧ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ನಡೆದಿದ್ದರೆ, ಇನ್ನೊಂದೆಡೆ ನಾಡಿಗೆ ಅನ್ನ ನೀಡುವ ರೈತರು ಕಬ್ಬಿನ ಬಿಲ್ಗಾಗಿ ಹಾಗೂ ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ರಸ್ತೆಗೆ ಇಳಿದು ಹೋರಾಟ ಮಾಡುತ್ತಿರುವುದು ತೀವ್ರ ಚಿಂತಾಜನಕ ಸಂಗತಿ” ಎಂದು ಅಥಣಿ ತಾಲೂಕಿನ ಜೆಡಿಎಸ್ ಮುಖಂಡ ಇಂತಿಯಾಜ್ ಹಿಪ್ಪರಗಿ ಕಳವಳ ವ್ಯಕ್ತಪಡಿಸಿದ್ದಾರೆ.

೭೧ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ಕೋರಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರೈತರ ಪ್ರಸ್ತುತ ಸ್ಥಿತಿಗತಿ ಹಾಗೂ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬೆಳಕು ಚೆಲ್ಲಿದ್ದಾರೆ.
ಮಾತಿಗೆ ಸೀಮಿತವಾದ ‘ಬೆನ್ನೆಲುಬು’ ಜಪ: “‘ರೈತ ದೇಶದ ಬೆನ್ನೆಲುಬು’ ಎನ್ನುವುದು ಬರೀ ಮಾತಿಗೆ ಸೀಮಿತವಾಗಿದೆ. ಇವತ್ತು ರೈತರ ಸಂಕಷ್ಟಗಳಿಗೆ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ರೈತರು ಧೃತಿಗೆಟ್ಟು ಈ ಬೆನ್ನೆಲುಬು ಮುರಿದರೆ ರಾಜಕಾರಣಿಗಳು ಮತ್ತು ಸಾರ್ವಜನಿಕರು ಏನನ್ನು ತಿನ್ನುತ್ತಾರೆ ಎನ್ನುವುದನ್ನು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ” ಎಂದರು.
ಹಿರಿಯ ನಾಯಕರ ರೈತ ಕಾಳಜಿ ಸ್ಮರಣೆ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ೧೦ HP ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಿದ್ದು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡಿದ್ದನ್ನು ಅವರು ಸ್ಮರಿಸಿದರು. ಅದೇ ರೀತಿ ರೈತರ ಕಷ್ಟಕ್ಕೆ ಸ್ಪಂದಿಸಿದ್ದ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ೧೩ ತಿಂಗಳ ಆಡಳಿತದಲ್ಲೇ ೧೦೦ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಕಾರಣರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ದೂರದೃಷ್ಟಿ ಇಂದಿನ ನಾಯಕರಿಗೂ ಇರಬೇಕು ಎಂದರು.
“ರೈತನಿಗೆ ಕೇವಲ ಸಾಕಷ್ಟು ನೀರು, ನಿರಂತರ ವಿದ್ಯುತ್, ಹೊಲಕ್ಕೆ ಸಂಪರ್ಕ ರಸ್ತೆ ಹಾಗೂ ಬೆಳೆದ ಬೆಳೆಗೆ ಯೋಗ್ಯ ಬೆಂಬಲ ಬೆಲೆ ನೀಡಿದರೆ ಸಾಕು, ಆತ ಬೀದಿಗೆ ಬಂದು ಹೋರಾಡುವ ಪರಿಸ್ಥಿತಿ ಬರುವುದಿಲ್ಲ” ಎಂದು ಅವರು ಪ್ರತಿಪಾದಿಸಿದರು.
ಸಾಲಮನ್ನಾಗೆ ವಿಶಿಷ್ಟ ಸಲಹೆ: “ರಾಜ್ಯದ ೨೨೪ ಶಾಸಕರು, ಮಂತ್ರಿಗಳು, ಸಂಸದರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮ ಪಕ್ಷಭೇದ ಮರೆತು ತಮ್ಮ ಒಂದು ತಿಂಗಳ ಸಂಬಳವನ್ನು ರೈತರಿಗಾಗಿ ನೀಡಿದರೆ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಸಾಧ್ಯ” ಎಂದು ಇಂತಿಯಾಜ್ ಹಿಪ್ಪರಗಿ ವಿಶೇಷ ಸಲಹೆ ನೀಡಿದ್ದಾರೆ.
ರಾಜ್ಯ ಸರ್ಕಾರವು ತಕ್ಷಣವೇ ಸ್ಪಂದಿಸಿ ಕಬ್ಬಿನ ಬೆಳೆಗಾರರ ಬಿಲ್ ಸಮಸ್ಯೆಯನ್ನು ಬಗೆಹರಿಸಿ, ರೈತರ ಮೂಲಭೂತ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಈ ಮೂಲಕ ವಿನಂತಿಸಿದ್ದಾರೆ. ವರದಿ : ಮಹೇಶ ಶರ್ಮ

More Stories
ಅಥಣಿ: ಉರ್ದು ಕ್ಲಸ್ಟರ್ ಪ್ರತಿಭಾ ಕಾರಂಜಿಯಲ್ಲಿ ಅಬುಲ್ ಕಲಾಂ ಶಾಲೆಗೆ ಸತತ ಎರಡನೇ ಬಾರಿ ಪ್ರಥಮ ಸ್ಥಾನ
ಪ್ರಮುಖ ವೃತ್ತಗಳಲ್ಲಿ ಮಿತಿಮೀರಿದ ಟ್ರಾಫಿಕ್ ಕಿರಿಕಿರಿ; ಮೇಲ್ಸೇತುವೆ, ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆಗ್ರಹ
ಅರಣ್ಯ ಭೂಮಿ ಹಕ್ಕು ಅರ್ಜಿಗಳ ಪುನರ್ ಪರಿಶೀಲನೆಗೆ ಸರ್ಕಾರ ಆದೇಶ: ಕಂದಾಯ, ಅರಣ್ಯ ಇಲಾಖೆಗೆ ಸಿಎಸ್ ಸೂಚನೆ