ನವೆಂಬರ್ ೧೬ರಂದು ಶಿರಸಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯು ನೀಡುವ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ನಾಲ್ವರು ಸಾಧಕ ಪತ್ರಕರ್ತರನ್ನು ವಿವಿಧ ಗೌರವಗಳಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ ೧೬ರಂದು ಶಿರಸಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಪ್ರಶಸ್ತಿ ಪುರಸ್ಕೃತ ಸಾಧಕರ ವಿವರ:

- ಮಾಧ್ಯಮ ರತ್ನ ಪ್ರಶಸ್ತಿ (ರಾಜ್ಯಮಟ್ಟದ ಪ್ರಶಸ್ತಿ – ₹೧೫,೦೦೦ ನಗದು): ತುಮಕೂರಿನ ಹಿರಿಯ ವರದಿಗಾರ ಹೆಚ್.ಆರ್. ಶ್ರೀಶ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೧೯೭೫ರ ತುರ್ತು ಪರಿಸ್ಥಿತಿ ಸಮಯದಲ್ಲಿ ‘ಸಂಯುಕ್ತ ಕರ್ನಾಟಕ’ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಇವರು, ‘ಕನ್ನಡಪ್ರಭ’ ಹಾಗೂ ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ ಐದು ದಶಕಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಖಾದ್ರಿ ಶಾಮಣ್ಣ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ಡಾ. ಯು. ಚಿತ್ತರಂಜನ್ ಪ್ರಶಸ್ತಿ (₹೧೦,೦೦೦ ನಗದು): ಹೊನ್ನಾವರದ ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಜಿ.ಯು. ಭಟ್ (ಗಜಾನನ ಉಮಾಮಹೇಶ್ವರ ಭಟ್) ಅವರಿಗೆ ಈ ಪ್ರಶಸ್ತಿ ಒಲಿದಿದೆ. ‘ಉದಯವಾಣಿ’ಯ ಹಿರಿಯ ವರದಿಗಾರರಾಗಿ ಸುದೀರ್ಘ ೫೫ ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಇವರು, ೨೦,೦೦೦ಕ್ಕೂ ಅಧಿಕ ವರದಿಗಳು, ೩,೦೦೦ಕ್ಕೂ ಹೆಚ್ಚು ಲೇಖನಗಳು ಹಾಗೂ ೯ ಪ್ರಸಿದ್ಧ ಕೃತಿಗಳನ್ನು ರಚಿಸಿದ್ದಾರೆ.
- ಕೆ. ಶಾಮರಾವ್ ಪ್ರಶಸ್ತಿ (₹೧೦,೦೦೦ ನಗದು): ಯಲ್ಲಾಪುರದ ಹಿರಿಯ ವರದಿಗಾರ ನರಸಿಂಹ ಸಾತೊಡ್ಡಿ (ನರಸಿಂಹ ವಿಶ್ವೇಶ್ವರ ಭಟ್) ಅವರು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ‘ಉದಯವಾಣಿ’ಯ ವರದಿಗಾರರಾಗಿರುವ ಇವರು, ಅಕ್ರಮ ಮರ ಕಳ್ಳಸಾಗಾಣಿಕೆ, ಬಿಸಗೋಡು ಗಣಿಗಾರಿಕೆ ವಿರುದ್ಧದ ಸರಣಿ ವರದಿಗಳು ಹಾಗೂ ಬೇಡ್ತಿ ಕೊಳ್ಳ ರಕ್ಷಣಾ ಚಳವಳಿಯ ಮುಂಚೂಣಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ.
- ಜಿ.ಎಸ್. ಹೆಗಡೆ ಅಜ್ಜೀಬಳ ಪುರಸ್ಕಾರ (₹೫,೦೦೦ ನಗದು): ಶಿರಸಿಯ ಭರವಸೆಯ ಯುವ ವರದಿಗಾರ, ‘ತತ್ತ್ವನಿಷ್ಠ’ ಪತ್ರಿಕೆಯ ಶಿರಸಿ ಪ್ರತಿನಿಧಿ ಮಂಜುನಾಥ ಈರಗೊಪ್ಪ ಅವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಪತ್ರಿಕೋದ್ಯಮದಲ್ಲಿ ತೋರುತ್ತಿರುವ ಕ್ರಿಯಾಶೀಲತೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

More Stories
ಮಣಿಪುರದಲ್ಲಿ ಕರ್ತವ್ಯದ ವೇಳೆ ಮೃತಪಟ್ಟ ಯೋಧ ಗಿರೀಶ ನಾಯ್ಕ ಮನೆಗೆ ಬಿಜೆಪಿ ಮುಖಂಡರ ಭೇಟಿ, ಸಾಂತ್ವನ
ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ; ಎಲ್ಲರ ಸಹಕಾರದಿಂದ ಟಿಬಿ ನಿರ್ಮೂಲನೆ ಸಾಧ್ಯ – ಡಾ. ಭಾರತಿ ಹೊಸಮನಿ
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು; ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಆಶಯ