November 23, 2026

ಪೊಲೀಸ್ ಸಿಬ್ಬಂದಿಗೆ ಇನ್ಮುಂದೆ ಖಾಕಿ ‘ವಿಸಿಲ್ ಗಾರ್ಡ್’ ಕಡ್ಡಾಯ: ಡಿಜಿಪಿ ಎಂ.ಎ. ಸಲೀಮ್ ಆದೇಶ

ತುಕ್ಕು ಹಿಡಿಯುವ ಮೆಟಲ್ ಚೈನ್‌ಗೆ ಮುಕ್ತಿ; ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳ ಆರೋಗ್ಯ ಹಿತದೃಷ್ಟಿಯಿಂದ, ಹಳೆ ಕಾಲದ ಲೋಹದ (ಮೆಟಲ್) ವಿಸಿಲ್ ಚೈನ್ ಬದಲಿಗೆ ನೂತನ ಖಾಕಿ ಬಣ್ಣದ ‘ವಿಸಿಲ್ ಗಾರ್ಡ್’ (ಲ್ಯಾನ್‌ಯಾರ್ಡ್) ಅಳವಡಿಸಿಕೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ (ಡಿಜಿ & ಐಜಿಪಿ) ಎಂ.ಎ. ಸಲೀಮ್ ಆದೇಶ ಹೊರಡಿಸಿದ್ದಾರೆ.

ಚರ್ಮರೋಗ ಹಾಗೂ ಸಮವಸ್ತ್ರ ಹಾನಿಗೆ ತಡೆ: ಪೊಲೀಸ್ ಸಿಬ್ಬಂದಿಯ ಸಮವಸ್ತ್ರದಲ್ಲಿದ್ದ ಲೋಹದ ವಿಸಿಲ್ ಚೈನ್‌ಗಳು ಹವಾಮಾನ ವೈಪರೀತ್ಯದಿಂದ ತುಕ್ಕು ಹಿಡಿಯುತ್ತಿದ್ದವು. ಇದರಿಂದ ಸಮವಸ್ತ್ರಗಳ ಮೇಲೆ ಕಲೆಗಳಾಗಿ ಬಟ್ಟೆ ಹಾಳಾಗುವುದಲ್ಲದೆ, ಚರ್ಮರೋಗ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು.

ಈ ಸಮಸ್ಯೆಯನ್ನು ಮನಗಂಡು, ದೇಶದ ಇತರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ವಿಸಿಲ್ ಗಾರ್ಡ್ ಅಳವಡಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಗೃಹ ಇಲಾಖೆ ಹಾಗೂ ಡಿಜಿಪಿ ಅವರಿಗೆ ನಿರಂತರವಾಗಿ ಪತ್ರ ಬರೆದು ಒತ್ತಾಯಿಸಿದ್ದರು.

ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲೂ ಈ ಕುರಿತು ಪ್ರಸ್ತಾಪಿಸಲಾಗಿತ್ತು. ಇದೀಗ ಸಿಬ್ಬಂದಿಯ ಆರೋಗ್ಯ ಮತ್ತು ಅನುಕೂಲತೆಯ ದೃಷ್ಟಿಯಿಂದ ಸಮವಸ್ತ್ರಕ್ಕೆ ಖಾಕಿ ಬಣ್ಣದ ನೂತನ ವಿಸಿಲ್ ಗಾರ್ಡ್ ಅಳವಡಿಸಲು ಅಧಿಕೃತ ಆದೇಶ ನೀಡಲಾಗಿದೆ. ಈ ಮಹತ್ವದ ನಿರ್ಧಾರಕ್ಕೆ ಮೋಹನ್ ಕುಮಾರ್ ದಾನಪ್ಪ ಅವರು ಸರ್ಕಾರ ಹಾಗೂ ಇಲಾಖೆಯ ಉನ್ನತಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

About The Author

error: Content is protected !!