ಹೊಸ ಹೋಟೆಲ್, ರೆಸಾರ್ಟ್ಗಳಿಗೆ ನಿರ್ಬಂಧ ಹೇರಿ ಆನ್ಲೈನ್ ಪಾಸ್ ವ್ಯವಸ್ಥೆ ಜಾರಿಗೊಳಿಸಲು ಒತ್ತಾಯ
ಮಡಿಕೇರಿ (ಕೊಡಗು): ಪುಟ್ಟ ಜಿಲ್ಲೆ ಕೊಡಗಿನ ಪರಿಸರ ಸಾಮರ್ಥ್ಯವನ್ನು ಮೀರಿ ಪ್ರವಾಸಿಗರು ಲಗ್ಗೆಯಿಡುತ್ತಿರುವುದರಿಂದ ಇಲ್ಲಿನ ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಉಂಟಾಗುತ್ತಿದೆ. ಪ್ರವಾಸೋದ್ಯಮವನ್ನು ಮತ್ತಷ್ಟು ವಿಸ್ತರಿಸುವ ಬದಲು ನಿಯಂತ್ರಿತ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಎನ್ವಿರಾನ್ಮೆಂಟಲ್ ಅಂಡ್ ಹೆಲ್ತ್ ಫೌಂಡೇಶನ್ ಇಂಡಿಯಾದ ಗೌರವ ಕಾರ್ಯದರ್ಶಿ, ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೊಡಗಿನಲ್ಲಿ ಸುಮಾರು ಆರು ಲಕ್ಷ ಜನಸಂಖ್ಯೆಯಿದ್ದರೆ, ವಾರ್ಷಿಕವಾಗಿ 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ, ತ್ಯಾಜ್ಯ ಸಮಸ್ಯೆ, ಜಲಮೂಲಗಳ ಮೇಲಿನ ಒತ್ತಡ ಮತ್ತು ಪರಿಸರ ಮಾಲಿನ್ಯ ಹೆಚ್ಚಾಗಿದೆ. ದಕ್ಷಿಣ ಭಾರತದ ಕೋಟ್ಯಂತರ ಜನರ ಜೀವನಾಡಿಯಾದ ಕಾವೇರಿ ನದಿಯ ಪ್ರಮುಖ ಜಲಾನಯನ ಪ್ರದೇಶವನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ಹಾಳುಗೆಡವಲು ಅವಕಾಶ ನೀಡಬಾರದು” ಎಂದರು.

ಪ್ರಮುಖ ಬೇಡಿಕೆ ಹಾಗೂ ಸಲಹೆಗಳು:
ಹೊಸ ರೆಸಾರ್ಟ್ಗಳಿಗೆ ನಿರ್ಬಂಧ: ಜಿಲ್ಲೆಯಲ್ಲಿ ಹೊಸ ಹೋಟೆಲ್ ಮತ್ತು ರೆಸಾರ್ಟ್ಗಳ ನಿರ್ಮಾಣಕ್ಕೆ ಪರವಾನಗಿ ನೀಡುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಈಗಾಗಲೇ ಅಣಬೆಗಳಂತೆ ತಲೆ ಎತ್ತಿರುವ ಹೋಂಸ್ಟೇಗಳ ಮೇಲೆಯೂ ಕಠಿಣ ನಿಯಂತ್ರಣ ಹೇರಬೇಕು.
ಆನ್ಲೈನ್ ಪಾಸ್ ವ್ಯವಸ್ಥೆ: ಪ್ರವಾಸೋದ್ಯಮ ಇಲಾಖೆಯು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಪ್ರವೇಶ ಪಾಸ್ ವ್ಯವಸ್ಥೆ ಜಾರಿಗೊಳಿಸಬೇಕು. ಕೊಡಗಿನ ಪ್ರತಿ ಪ್ರವಾಸಿ ತಾಣಕ್ಕೆ ದಿನವೊಂದಕ್ಕೆ ಗರಿಷ್ಠ 150 ಪಾಸ್ಗಳನ್ನು ಮಾತ್ರ ವಿತರಿಸಬೇಕು.
ಪ್ರವೇಶ ಹಾಗೂ ವಾಹನ ಶುಲ್ಕ: ಪ್ರತಿ ಪ್ರವಾಸಿಗರಿಗೆ ₹500 ಪ್ರವೇಶ ಶುಲ್ಕ ವಿಧಿಸಬೇಕು. ನಾಲ್ಕು ಚಕ್ರದ ವಾಹನಗಳಿಗೆ ಹೆಚ್ಚುವರಿಯಾಗಿ ₹500 ಹಾಗೂ ವ್ಯಾನ್, ಬಸ್ಗಳಿಗೆ ₹3,000 ಶುಲ್ಕ ನಿಗದಿಪಡಿಸಬೇಕು. ಈ ಆದಾಯವನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ, ನಗರಸಭೆ ಅಥವಾ ಅರಣ್ಯ ಇಲಾಖೆಗಳ ಮೂಲಕ ತಾಣಗಳ ನಿರ್ವಹಣೆಗೆ ಬಳಸಿಕೊಳ್ಳಬೇಕು.
15 ದಿನಕ್ಕೊಮ್ಮೆ ಸ್ವಚ್ಛತಾ ರಜೆ: ಸ್ವಚ್ಛತೆ ಮತ್ತು ನಿರ್ವಹಣೆಯ ದೃಷ್ಟಿಯಿಂದ ಪ್ರತಿ ಪ್ರವಾಸಿ ತಾಣವನ್ನು 15 ದಿನಗಳಿಗೊಮ್ಮೆ ಒಂದು ದಿನ ಮುಚ್ಚಬೇಕು. ಆದರೆ, ಭಾಗಮಂಡಲ, ತಲಕಾವೇರಿ ಸೇರಿದಂತೆ ಪವಿತ್ರ ಕ್ಷೇತ್ರಗಳಿಗೆ ಧಾರ್ಮಿಕ ಆಚರಣೆಗಳಿಗಾಗಿ ತೆರಳುವ ಕೊಡಗಿನ ಸ್ಥಳೀಯರಿಗೆ ವಿಶೇಷ ಪ್ರವೇಶ ಅನುಮತಿ ನೀಡಬೇಕು.
ಮೂಲಸೌಕರ್ಯವಿಲ್ಲದ ಹೋಂಸ್ಟೇಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಸಂಸ್ಥೆಯ ಸದಸ್ಯ ಗೋಪಿನಾಥ್ ತಿಮ್ಮಯ್ಯ ಮಾತನಾಡಿ, “ಮಿತಿಮೀರಿದ ಪ್ರವಾಸೋದ್ಯಮದಿಂದ ಸ್ಥಳೀಯರು ನೆಮ್ಮದಿ ಕಳೆದುಕೊಂಡಿದ್ದಾರೆ. ಜಿಲ್ಲೆಯ ಬಹುತೇಕ ಹೋಂಸ್ಟೇ ಮತ್ತು ರೆಸಾರ್ಟ್ಗಳಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲದಿದ್ದರೂ ಪ್ರವಾಸಿಗರಿಂದ ದುಬಾರಿ ದರ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ, ಬಾಡಿಗೆ ಬೈಕ್ಗಳಲ್ಲಿ ಪ್ರವಾಸಿಗರ ಅತಿವೇಗದ ಚಾಲನೆಗೆ ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು. ವರದಿ: ಪ್ರಿತುನ್ ಪೂವಣ್ಣ, ಮಡಿಕೇರಿ

More Stories
ಆಂಗ್ಲ ಭಾಷೆಯ ನಾಮಫಲಕ ಅಳವಡಿಕೆಗೆ ಕರವೇ ಆಕ್ರೋಶ; ನಗರಸಭೆ ವಿರುದ್ಧ ಕಿಡಿ
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ‘ಯುವ ಸಂಸತ್ತು’ ಉದ್ಘಾಟಿಸಿದ ಶಾಸಕ ಡಾ. ಮಂತರ್ ಗೌಡ
ಮಡಿಕೇರಿ ದಸರಾವನ್ನು ವೈಭವದ ಜನೋತ್ಸವವನ್ನಾಗಿಸಲು ಕಟಿಬದ್ಧ: ಶಾಸಕ ಡಾ. ಮಂತರ್ ಗೌಡ