November 22, 2026

ಕಡಲ ಅಲೆಗಳ ನಡುವೆ ಕಂಗೊಳಿಸಿದ ಆರತಿಯ ಬೆಳಕು; ಮುರುಡೇಶ್ವರದಲ್ಲಿ ಭಕ್ತಿಸಾಗರ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಮುದ್ರ ಆರತಿ ವೈಭವ; ಪ್ರಕೃತಿ ವಿಕೋಪ ನಿವಾರಣೆ, ಕರಾವಳಿ ಪ್ರವಾಸೋದ್ಯಮ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ

ಭಟ್ಕಳ (ಉತ್ತರ ಕನ್ನಡ): ಅರಬ್ಬಿ ಸಮುದ್ರದ ಅಲೆಗಳ ನಿನಾದ, ಸೂರ್ಯಾಸ್ತದ ಸೊಬಗು, ಭಕ್ತರ ಜಯಘೋಷ ಹಾಗೂ ಆರತಿಯ ಬೆಳಕಿನ ಅಪೂರ್ವ ಆಧ್ಯಾತ್ಮಿಕ ವಾತಾವರಣಕ್ಕೆ ಪುರಾಣ ಪ್ರಸಿದ್ಧ ಮುರುಡೇಶ್ವರ ಕ್ಷೇತ್ರ ಸಾಕ್ಷಿಯಾಯಿತು. ಮಹತೋಭಾರ ಶ್ರೀ ಮುರುಡೇಶ್ವರ ದೇವಸ್ಥಾನ ಹಾಗೂ ಊರ ಸೀಮಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಸಮುದ್ರ ಆರತಿ’ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

ವಿವಿಧ ಧಾರ್ಮಿಕ ಕೈಂಕರ್ಯಗಳು: ಸಮುದ್ರ ಆರತಿ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಪ್ರಧಾನ ಅರ್ಚಕರಾದ ಜಯರಾಮ ಅಡಿ ಮತ್ತು ಶಿವರಾಮ ಅಡಿ ಅವರ ಮಾರ್ಗದರ್ಶನದಲ್ಲಿ ಶತರುದ್ರಾನುಷ್ಠಾನ, ತೀರ್ಥಹೋಮ, ಪೂರ್ಣಾಹುತಿ, ಶ್ರೀ ರುದ್ರ ಕಲಶಾಭಿಷೇಕ ಹಾಗೂ ಭಕ್ತರಿಂದ ಮುಷ್ಟಿ ನಾಣ್ಯ ಸಮರ್ಪಣೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಸಂಜೆ ದೇವಸ್ಥಾನದಿಂದ ತೀರ್ಥಕುಂಭವನ್ನು ಭಕ್ತಿಪೂರ್ವಕ ಮೆರವಣಿಗೆಯಲ್ಲಿ ಕಡಲತೀರಕ್ಕೆ ಕೊಂಡೊಯ್ಯಲಾಯಿತು. ಶಾಸ್ತ್ರೋಕ್ತ ಪೂಜೆಯ ಬಳಿಕ ಸಮುದ್ರ ದೇವತೆಗೆ ಮಹಾ ಆರತಿ ಬೆಳಗಲಾಯಿತು. ಪ್ರಕೃತಿ ವಿಕೋಪಗಳಿಂದ ಕರಾವಳಿ ಪ್ರದೇಶವನ್ನು ರಕ್ಷಿಸಬೇಕು, ಜನಜೀವನ ಸುಭದ್ರವಾಗಿರಬೇಕು ಹಾಗೂ ಈ ಭಾಗದ ಪ್ರವಾಸೋದ್ಯಮ ಇನ್ನಷ್ಟು ಸಮೃದ್ಧಿಯಾಗಬೇಕು ಎಂಬ ಸಂಕಲ್ಪದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸ್ಥಳೀಯರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಈ ದಿವ್ಯ ಕ್ಷಣವನ್ನು ಕಣ್ತುಂಬಿಕೊಂಡರು.

ಗಣ್ಯರ ಉಪಸ್ಥಿತಿ ಹಾಗೂ ಸಾಂಸ್ಕೃತಿಕ ವೈಭವ: ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ, ಎಸ್.ಎಸ್. ಕಾಮತ್, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ನೇತ್ರಾಣಿ ಅಡ್ವೆಂಚರ್ಸ್‌ನ ಗಣೇಶ ಹರಿಕಾಂತ, ಕೃಷ್ಣ ನಾಯ್ಕ ಮುರುಡೇಶ್ವರ, ಬೀನಾ ವೈದ್ಯ ಎಜುಕೇಶನ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ವೈದ್ಯ, ಭಟ್ಕಳ ಅರ್ಬನ್ ಬ್ಯಾಂಕ್ ನಿರ್ದೇಶಕಿ ಬೀನಾ ವೈದ್ಯ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ನಯನಾ ನಾಯ್ಕ, ನಾಗರತ್ನ ಪಡಿಯಾರ ಸೇರಿದಂತೆ ಹಲವು ಗಣ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮದ ಜೊತೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಝೇಂಕಾರ ಮೆಲೋಡಿಸ್ ತಂಡದ ಕಲಾವಿದರಿಂದ ಪ್ರದರ್ಶನಗೊಂಡ ಭರತನಾಟ್ಯ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಮುದ್ರ ತಟದಲ್ಲಿ ನಡೆದ ಈ ಆರತಿ ಮಹೋತ್ಸವವು ಮುರುಡೇಶ್ವರದ ಧಾರ್ಮಿಕ ಪರಂಪರೆ, ಭಕ್ತರ ಒಗ್ಗಟ್ಟು ಹಾಗೂ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸಿತು.

About The Author

error: Content is protected !!