ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ನಾಗರಾಜ ನಾಯ್ಕ ಕರೆ
ಕುಮಟಾ (ಉತ್ತರ ಕನ್ನಡ): ತಾಲೂಕಿನ ಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ತುಮಕೂರಿನ ಶ್ರೀರಾಮಕೃಷ್ಣ – ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ ರಾಜ್ಯಮಟ್ಟದ ‘ವಿವೇಕ ವಿದ್ಯಾರ್ಥಿ ಪರೀಕ್ಷೆ’ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಸ್ವಾಮಿ ಪುರುಷೋತ್ತಮಾನಂದರ ಪಠ್ಯಾಧಾರಿತ ಈ ಪರೀಕ್ಷೆಯಲ್ಲಿ ಪ್ರೌಢಶಾಲೆಯ ಪ್ರತಿ ತರಗತಿಯಿಂದ ತಲಾ 10 ವಿದ್ಯಾರ್ಥಿಗಳಂತೆ ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಬರ್ಗಿ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕ ಹಾಗೂ ಕರ್ನಾಟಕ ಸಂಸ್ಕೃತ ಪರಿಷತ್ತಿನ ರಾಜ್ಯಾಧ್ಯಕ್ಷ ಮಂಜುನಾಥ ಗಾಂವಕರ್ ಬರ್ಗಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿ ಮತ್ತು ರಾಮಕೃಷ್ಣ-ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಸ್ವಯಂಸೇವಕ ಮಂಜುನಾಥ ಹೆಗಡೆ ಕಡೆಕೋಡಿ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದರು.

ಪರೀಕ್ಷೆಯ ಆರಂಭದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು, ಮಹಾಮಾತೆ ಶ್ರೀ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ತುಪ್ಪದ ದೀಪ ಬೆಳಗಿ ಮಾತನಾಡಿದ ಬರ್ಗಿ ಪ್ರೌಢಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗರಾಜ ಕೃಷ್ಣ ನಾಯ್ಕ, “ಜಗತ್ತಿಗೆ ಭಾರತದ ಶ್ರೇಷ್ಠತೆಯನ್ನು ಪರಿಚಯಿಸಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಯಶೋಗಾಥೆಯನ್ನು ಅಭ್ಯಸಿಸಿ, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಬೇಕು” ಎಂದು ಕರೆ ನೀಡಿದರು.
ಹಳೆಯ ವಿದ್ಯಾರ್ಥಿಗಳ ಸಂಘದಿಂದ ಊಟದ ವ್ಯವಸ್ಥೆ: ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗರಾಜ ಕೃಷ್ಣ ನಾಯ್ಕ ಅವರೇ ಭರಿಸಿದ್ದು, ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನೂ ಕಲ್ಪಿಸಿದ್ದರು.
ಈ ಸಂದರ್ಭದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ‘ಕನ್ನಡ ಭಾರತೀ ಪ್ರಪಂಚ’ದ ಸಂಚಾಲಕ ನಾಗನೆಲೆಯ ನಾರಾಯಣ ನಾಗು ನಾಯಕ, ಕುಮಟಾ ತಾಲೂಕು ಸಂತ ಸೇವಾಲಾಲ ಸಂಘದ ಅಧ್ಯಕ್ಷ ಶಿವಚಂದ್ರ, ಕಿರಣಶೂರ್ ಚಿತ್ರದುರ್ಗ, ಮಾಳಪ್ಪ ಜಂತ್ಲಿ, ಶಮಿಕಾ ಹರಿಕಂತ್ರ, ಕೀರ್ತನಾ ನಾಯಕ ಹಾಗೂ ಗೌರೀಶ ಪಟಗಾರ ಉಪಸ್ಥಿತರಿದ್ದು ಪರೀಕ್ಷೆಯ ಯಶಸ್ಸಿಗೆ ಸಹಕರಿಸಿದರು.
ಕಳೆದ ಮೂರು ವರ್ಷಗಳಿಂದ ಬರ್ಗಿ ಪ್ರೌಢಶಾಲೆಯಲ್ಲಿ ಈ ಪರೀಕ್ಷೆ ನಡೆಯಲು ಕಾರಣರಾದ ತುಮಕೂರಿನ ಪರಿಷತ್ತಿನ ಮುಖ್ಯಸ್ಥರು, ಜಿಲ್ಲಾ ಪರೀಕ್ಷಾ ಸಂಯೋಜಕ ರಾಮಚಂದ್ರ ಹೆಗಡೆ, ಪ್ರತಿನಿಧಿಗಳಾದ ಡಾ. ಶ್ರೀದೇವಿ ಹೆಗಡೆ, ಸುರೇಶ ಭಟ್, ಶಾಲೆಯ ಮುಖ್ಯಾಧ್ಯಾಪಕ ಮಧುಕೇಶ್ವರ ನಾಯ್ಕ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗರಾಜ ನಾಯ್ಕ ಅವರಿಗೆ ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವ್ಕರ್ ಕೃತಜ್ಞತೆ ಸಲ್ಲಿಸಿದರು.

More Stories
ವರ್ಗಾವಣೆಗೊಂಡ ಪತ್ರಾಂಕಿತ ವ್ಯವಸ್ಥಾಪಕ ದೇವದಾಸ ಜಾದವರಿಗೆ ಬೋಧಕರ ಸಂಘದಿಂದ ಆತ್ಮೀಯ ಸನ್ಮಾನ
ಮಕ್ಕಳ ಪ್ರೀತಿಯ ನೆಹರೂಜಿ ಅನನ್ಯ ವ್ಯಕ್ತಿತ್ವದ ನಾಯಕ: ಮುಖ್ಯಾಧ್ಯಾಪಕ ಮಧುಕೇಶ್ವರ ನಾಯ್ಕ
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹೆಮ್ಮೆಯ ಕ್ರೀಡಾಪಟುಗಳು