ಭಟ್ಕಳ: ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಗೆ ಪರಿಚಯ ಮಾಡಿಕೊಂಡು ಅಶ್ಲೀಲ ಸಂದೇಶ ಕಳುಹಿಸಿ, ಖಾಸಗಿ ಫೋಟೊಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸರು ಆರೋಪಿತನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮಹ್ಮದ್ ಯುಶಾ (31), ತಂದೆ ಮಹ್ಮದ್ ಸಾಯಿ ಅಬು ಮಹ್ಮದಾ, ಮಂಕಿ ಭಾಷಾ ಕಾಲೋನಿ ನಿವಾಸಿ ಎಂದು ಗುರುತಿಸಲಾಗಿದೆ.
ಭಟ್ಕಳ ಮುಗುಂಕಾಲನಿ ನಿವಾಸಿ ಮಹಿಳೆಯೊಂದಿಗೆ ಆರೋಪಿತನು ಸುಮಾರು ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು, ಮೊಬೈಲ್ ಸಂಖ್ಯೆ ಪಡೆದು ಸಲುಗೆ ಬೆಳೆಸಿಕೊಂಡಿದ್ದಾನೆ. ನಂತರ ಮಹಿಳೆಯ ಖಾಸಗಿ ಫೋಟೊಗಳನ್ನು ಪಡೆದು, ಪದೇಪದೇ ಕರೆ ಮಾಡಿ ಮಾತನಾಡದಿದ್ದರೆ ಫೋಟೊಗಳನ್ನು ಎಲ್ಲರಿಗೂ ಶೇರ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ ಮಹಿಳೆಯ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಕರೆ ಮಾಡಿ ಫೋಟೊಗಳನ್ನು ಹರಿಬಿಡುವುದಾಗಿ ಬೆದರಿಸಿ, ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ತನಿಖೆ ನಡೆಸಿ ಆರೋಪಿತನನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್‌ಗಳು ಹಾಗೂ ಪೆನ್‌ಡ್ರೈವ್‌ಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿಗೊಂಡ ವಸ್ತುಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ. ಕೃಷ್ಣಮೂರ್ತಿ ಹಾಗೂ ಜಗದೀಶ ಎಂ., ಡಿವೈಎಸ್ಪಿ ಮಹೇಶ್ ಎಂ., ಸಿಪಿಐ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ ಪಿಎಸ್‌ಐ ನವೀನ್ ಎಸ್. ನಾಯ್ಕ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಬಂಧಿತ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


More Stories
ಶ್ರೀ ಗುರುಸುಧೀಂದ್ರ ಕಾಲೇಜಿನಲ್ಲಿ B.Sc. ಕ್ರಿಮಿನಾಲಜಿ & ಫೋರೆನ್ಸಿಕ್ ಸೈನ್ಸ್ ಕೋರ್ಸ್ಗೆ ಚಾಲನೆ: ಎಸ್ಪಿ ದೀಪನ್ ಎಂ.ಎನ್. ಉದ್ಘಾಟನೆ
ಭಟ್ಕಳದಲ್ಲಿ ‘ಶೌರ್ಯ’ ವಿಪತ್ತು ನಿರ್ವಹಣಾ ಪಡೆಗೆ NDRF ನಿಂದ ತರಬೇತಿ ಕಾರ್ಯಕ್ರಮ
ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ತಪ್ಪಿಸಿರುವುದು ಜನರ ಧ್ವನಿಯನ್ನೇ ಕಟ್ಟಿಹಾಕಿದಂತೆ: ಮಂಕಿ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ನಾಯ್ಕ್ ಆಕ್ರೋಶ