ಭಟ್ಕಳ : ವ್ಯವಹಾರ ಜ್ಞಾನಕ್ಕೆ ವೇದಿಕೆ
ಭಟ್ಕಳ: ಪಾಲಕರು ತಮ್ಮ ಮಕ್ಕಳ ಜೊತೆಗೂಡಿ ದಿನನಿತ್ಯದ ಸಾಮಾನು ಖರೀದಿಗೆ ತೆರಳಬೇಕು. ಇದರಿಂದ ಕೊಳ್ಳುವ-ಮಾರುವ ಜ್ಞಾನ ಮಕ್ಕಳಿಗೂ ಲಭಿಸಿ, ಹಣದ ಮೌಲ್ಯ ತಿಳಿಯುತ್ತದೆ ಎಂದು ಉದ್ಯಮಿ ವಿನೋದ ಬಡಾಳ ಹೇಳಿದರು.

ಅವರು ಮಣ್ಕುಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ವ್ಯವಹಾರ ಜ್ಞಾನ, ಹಣಕಾಸಿನ ಅರಿವು ಹಾಗೂ ಸ್ವಾವಲಂಬನೆ ಮನೋಭಾವ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಉದ್ಯಮಿ ಅಚ್ಯುತ್ ಕಾಮತ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ತೋರಿಸಿರುವುದನ್ನು ಉಲ್ಲೇಖಿಸಿದರು. ತಂದೆ-ತಾಯಿ ಮತ್ತು ಗುರುಹಿರಿಯರಿಗೆ ಗೌರವ ನೀಡಿ, ಓದಿನಲ್ಲಿ ಆಸಕ್ತಿ ತೋರುವ ವಿದ್ಯಾರ್ಥಿ ಯಾವ ಶಾಲೆಯಲ್ಲಿದ್ದರೂ ಸಾಧನೆ ಮಾಡಬಹುದು ಎಂದರು.
ಪತ್ರಕರ್ತ ಮೋಹನ ನಾಯ್ಕ ಮಾತನಾಡಿ, ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಇರುವ ನಿಯಮ-ಬಂಧನಗಳಿಗಿಂತ ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಶಾಲಾ ಚಟುವಟಿಕೆಗಳ ಜೊತೆಗೆ ಸಮುದಾಯ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿದೆ ಎಂದರು. ಮಣ್ಕುಳಿಯ ಶಾಲಾ ಅಭಿವೃದ್ಧಿ ಸಮಿತಿಯವರು ಅಚ್ಚುಕಟ್ಟಾಗಿ ಮಕ್ಕಳ ಸಂತೆ ಏರ್ಪಡಿಸಿ ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬಿ.ಆರ್.ಸಿ ಗೋಪಾಲ ನಾಯ್ಕ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಎಂ.ಎಸ್. ನಾಯ್ಕ ಮಾತನಾಡಿದರು. ಪುರಸಭೆ ಸದಸ್ಯರಾದ ಸುರೇಶ ನಾಯ್ಕ, ನಾಗರಾಜ ನಾಯ್ಕ ಹಾಗೂ ಪ್ರಮುಖರಾದ ನಾಗೇಶ ನಾಯ್ಕ, ರಾಜೇಶ ನಾಯ್ಕ, ಸುಧಾಕರ ನಾಯ್ಕ, ಪಾಂಡುರಂಗ ನಾಯ್ಕ, ಪ್ರಮೋದ ಬಡಾಳ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ ನಾಯ್ಕ, ಮುಖ್ಯ ಶಿಕ್ಷಕಿ ವನಜಾಕ್ಷಿ ಉಪಸ್ಥಿತರಿದ್ದರು.
ಮಕ್ಕಳ ಸಂತೆಗೆ ಭೇಟಿ ನೀಡಿದ ವಿದ್ಯಾರ್ಥಿಗಳ ಪಾಲಕರು ಮತ್ತು ಸಾರ್ವಜನಿಕರು ಮಕ್ಕಳಿಂದ ವಿವಿಧ ಬಗೆಯ ದಿನನಿತ್ಯದ ವಸ್ತುಗಳನ್ನು ಖರೀದಿಸಿ ಖುಷಿಪಟ್ಟರು. ವಿದ್ಯಾರ್ಥಿಗಳ ಉತ್ಸಾಹ, ವ್ಯವಸ್ಥಾಪನಾ ಕೌಶಲ್ಯ ಮತ್ತು ಆತ್ಮವಿಶ್ವಾಸ ಗಮನ ಸೆಳೆಯಿತು.

About The Author


More Stories
ರೈತರ ಕೃಷಿ ರಸ್ತೆಗೆ ಅಡ್ಡಿ ಆರೋಪ: ತಹಶೀಲ್ದಾರ್ ಕಚೇರಿಗೆ ಮನವಿ
ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲೇ ಅಕ್ರಮ ಮರಳು ಸಾಗಾಟಕ್ಕೆ ಬಿಸಿ ಮುಟ್ಟಿಸಿದ ಎಎಸ್ಪಿ ರಾನು ಗುಪ್ತ: 6 ಟಿಪ್ಪರ್ಗಳು, 6 ಮಂದಿ ವಶಕ್ಕೆ
ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯರಿಗೆ ಕೆಡಿಸಿಸಿ ಬ್ಯಾಂಕ್ ನೌಕರರಿಂದ ಸನ್ಮಾನ