ಕಾರ್ಕಳ: ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಾಭಿಷೇಕ ಸಮಿತಿ ದಾನಶಾಲೆ ಕಾರ್ಕಳ ಇದರ ಕಾರ್ಯಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಹಾಮಸ್ತಾಭಿಷೇಕ ಮಹೋತ್ಸವದ ಕುರಿತು ಮಾಹಿತಿ ನೀಡಿದರು.
ಕರಾವಳಿ ಕರ್ನಾಟಕದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕಾರ್ಕಳದ ಗೋಮಟೇಶ್ವರ ಬೆಟ್ಟದಲ್ಲಿ ಪ್ರತಿಷ್ಠಾಪಿತವಾಗಿರುವ ಏಕಶಿಲಾ ಶ್ರೀ ಗೋಮಟೇಶ್ವರ ವಿಗ್ರಹವು ಸರ್ವಧರ್ಮೀಯರ ಸೌಹಾರ್ದತೆಯ ಸಂಕೇತವಾಗಿದೆ. 18 ಪ್ರಾಚೀನ ಜೈನ ಮಂದಿರಗಳಿಂದ ಅಲಂಕರಿಸಲ್ಪಟ್ಟಿರುವ ಈ ಕ್ಷೇತ್ರವು ಜೈನ ಕಾಶಿ ಎಂದೇ ಖ್ಯಾತಿ ಪಡೆದಿದ್ದು, ಎಲ್ಲ ಸಮುದಾಯದ ಜನರಿಗೂ ಆಕರ್ಷಕ ಧಾರ್ಮಿಕ ಕೇಂದ್ರವಾಗಿದೆ.
42 ಅಡಿ ಎತ್ತರದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ವಿಗ್ರಹವನ್ನು ಕ್ರಿ.ಶ. 1432ರಲ್ಲಿ ಕಾರ್ಕಳದ ಭೈರವಸ ವಂಶದ ಪಾಂಡ್ಯರಾಜನು ಪರಮಪೂಜ್ಯ ಲಲಿತಕೀರ್ತಿ ಯತಿ ಶ್ರೇಷ್ಠರ ಪ್ರೇರಣೆಯಿಂದ ಪ್ರತಿಷ್ಠಾಪಿಸಿದ್ದಾನೆ. ಇದು ಶ್ರವಣಬೆಳಗೊಳದ ನಂತರದ ಎರಡನೇ ಅತಿ ಎತ್ತರದ ಏಕಶಿಲಾ ವಿಗ್ರಹವಾಗಿದೆ.
ಪಾರಂಪರಿಕವಾಗಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಾಭಿಷೇಕ ಮಹೋತ್ಸವವು 1954, 1990, 2002 ಮತ್ತು 2015ರಲ್ಲಿ ವೈಭವದಿಂದ ನಡೆದಿದ್ದು, ಮುಂದಿನ ಮಹೋತ್ಸವವು 2027ರ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ ಮಹೋತ್ಸವದ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಯಾತ್ರಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸುಮಾರು ₹82.37 ಕೋಟಿ ವೆಚ್ಚದ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. 2015ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಅನುದಾನ ನೀಡಿದ್ದನ್ನು ಸ್ಮರಿಸಿದ ಅವರು, ಈ ಬಾರಿಯೂ ಸರ್ಕಾರದಿಂದ ಸಂಪೂರ್ಣ ಸಹಕಾರ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಕಳದ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ಥ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ, ಮಹಾಮಸ್ತಾಭಿಷೇಕ ಸಮಿತಿಯ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಅವರು ಏಪ್ರಿಲ್ 19ರಂದು ಮಹೋತ್ಸವ ಕಾರ್ಯಾಲಯ ಉದ್ಘಾಟನೆ ನೆರವೇರಿಸಿ 2027ರ ಮಹೋತ್ಸವದ ದಿನಾಂಕವನ್ನು ಘೋಷಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಬಿ. ಸುಧಾಕರ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ವಿ. ಸುನಿಲ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಗಣ್ಯರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವರದಿ : ಅರುಣ ಭಟ್ ಕಾರ್ಕಳ
About The Author


More Stories
ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ: ಶುಭದರಾವ್ ಅವರಿಂದ ಗುರುಭಕ್ತಿ
ಮುನಿಯಾಲಿನಲ್ಲಿ ಸಹಸ್ರ ಶ್ರೀಕೃಷ್ಣ ನಾಮ ತುಳಸಿ ದಳ ಅರ್ಚನೆ
ವಿಶ್ವ ಕ್ರೀಡಾ ದಿನಾಚರಣೆ