ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸದಾಶಿವ ಬೂಟಾಳಿ ಅವರ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ತಾಲೂಕು ಮುಖ್ಯಸ್ಥ ಪ್ರವೀಣ ನಾಯಿಕ ಅವರು ದಂಪತಿಗೆ ಶುಭಾಶಯ ಕೋರಿದರು.

ಸಮಾಜಮುಖಿ ಚಟುವಟಿಕೆಗಳು, ಬಡಜನರ ಪರ ಸೇವಾಭಾವ ಹಾಗೂ ನಗರ ಅಭಿವೃದ್ಧಿಗೆ ಪ್ರಾಮಾಣಿಕ ರಾಜಕೀಯ ಧೋರಣೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಿಗೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು. ಅಥಣಿ ನಗರದಲ್ಲಿ ಮಹಿಳೆಯರು ಹಾಗೂ ಪುರುಷರಿಗಾಗಿ ಸಮರ್ಪಕ ಸಾರ್ವಜನಿಕ ಮೂತ್ರಾಲಯ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು. ಜೊತೆಗೆ ಕೆಲ ಪ್ರದೇಶಗಳಲ್ಲಿ ಸ್ವಚ್ಛತೆ ಕೊರತೆ ಕಂಡುಬರುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.
ಶಿವಯೋಗಿ ನಗರವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ನಗರದ ವಿವಿಧ ವಾರ್ಡುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುವುದರಿಂದ ರಸ್ತೆ, ಕುಡಿಯುವ ನೀರು, ಒಳಚರಂಡಿ ಹಾಗೂ ಸ್ವಚ್ಛತಾ ಕಾಮಗಾರಿಗಳಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ನಗರದ ಹಲವೆಡೆ ತೆರೆಯಲ್ಪಟ್ಟಿರುವ ಚರಂಡಿಗಳಿಗೆ ಮುಚ್ಚಳಿಕೆ ಅಳವಡಿಸದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಜೆಜೆಎಂ ಯೋಜನೆಯಡಿ 24 ಗಂಟೆ ನೀರು ಸರಬರಾಜು ಕಾಮಗಾರಿಗಾಗಿ ಅಳವಡಿಸಿರುವ ಪೈಪ್‌ಲೈನ್ ಕಾಮಗಾರಿಗಳ ನಂತರ ತೆಗ್ಗು-ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಅವರು, ನಗರ ಹಾಗೂ ಕ್ಷೇತ್ರದ ಅಭಿವೃದ್ಧಿಯೇ ತಮ್ಮ ಮುಖ್ಯ ಗುರಿಯಾಗಿದ್ದು, ನಾಗರಿಕರಿಗೆ ಸ್ವಚ್ಛತೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶರಣಪ್ಪ ಶಿಂದೆ, ಅನೀಲ ಭಾಮನೆ, ಎಂ. ಶರ್ಮಾ, ಶಿವಾನಂದ ನಾವಿ, ಕವಿತಾ ಭೋಸಲೆ, ಪ್ರಶಾಂತ ಶಿಂದೆ, ಸಂಗೀತಾ ಮುರಗೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾರ್ವಜನಿಕರು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಗಳತ್ತ ಗಂಭೀರ ಗಮನ ಹರಿಸಿ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ವರದಿ : ಮಹೇಶ್ ಶರ್ಮಾ


More Stories
ಬೈಲಹೊಂಗಲ ತಾಲೂಕಿನಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಮೂರ್ತಿಗಳ ವಿತರಣೆ
ವೃದ್ದಾಶ್ರಮದಲ್ಲಿ ಸರಳವಾಗಿ ರಾಜು ಕಾಗೆ ಜನ್ಮದಿನ ಆಚರಣೆ
ಮಹಿಳಾ ಆಯೋಗದ ಸೂಚನೆಗೂ ಬೆಲೆ ಇಲ್ಲ!ಮಂಗಸೂಳಿಯಲ್ಲಿ ಚರಂಡಿ ಸಮಸ್ಯೆಯಿಂದ ಬಡ ಕುಟುಂಬದ ಪರದಾಟ, ಅಧಿಕಾರಿಗಳ ವಿರುದ್ಧ ಆಕ್ರೋಶ