ಹೊನ್ನಾವರ ಮೇ. 20: ಭಟ್ಕಳದಲ್ಲಿ ಸಾಮಾನ್ಯ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ದಿನೇಶ ಪೈ, ಪ್ರದೀಪ ಪೈ, ಜಗದೀಶ ಪೈ ಈ ದಾಯಾದಿ ಸಹೋದರರು ವಿದೇಶಕ್ಕೆ ಹೋದಾಗ ಕಣ್ಣಿಗೆ ಬಿದ್ದ ಸಾಫ್ಟಿ ಐಸ್‌ಕ್ರೀಮ್‌ನ್ನು ಮನಸ್ಸಿನಲ್ಲಿಟ್ಟುಕೊಂಡು 1997 ರಲ್ಲಿ ಐಸ್‌ಕ್ರೀಮ್ ರಾಜಧಾನಿ ಅನಿಸಿದ ಮಂಗಳೂರಿಗೆ ಹೋಗಿ ಸಾಫ್ಟಿ ಐಸ್‌ಕ್ರೀಮ್ ಆರಂಭಿಸಿ ದಕ್ಷಿಣಕನ್ನಡದವರ ನಾಲಿಗೆಗೆ ಹೊಸ ರುಚಿ ಕೊಟ್ಟವರು ಮತ್ತೆ ಹಿಂತಿರುಗಿ ನೋಡಲಿಲ್ಲ.

ಹಾಂಗ್ಯೋ ಸ್ಥಾಪಿಸಿ ಇಂದು ಉಡುಪಿ ತಾಲೂಕಿನ ಹೇರೂರಿನಲ್ಲಿ ಮತ್ತು ಉಕ ಜಿಲ್ಲೆಯ ಹಿಂದುಳಿದ ಪ್ರದೇಶ ಯಲ್ಲಾಪುರ ಕಿರುವತ್ತಿಯಲ್ಲಿ ಐಸ್‌ಕ್ರೀಮ್ ಉದ್ಯಮ ವಿಸ್ತರಿಸಿ ನಿತ್ಯ 1,25,000 ಲೀ. ಐಸ್‌ಕ್ರೀಮ್ ಉತ್ಪಾದಿಸಲಾಗುತ್ತಿದೆ. 1,200 ಜನರಿಗೆ ನೇರ ಉದ್ಯೋಗ ನೀಡಿದೆ. ಸುಮಾರು 300 ಕೋಟಿ ರೂ. ವ್ಯವಹಾರ ಮಾಡುವ ಹಾಂಗ್ಯೋ ಇದೀಗ ಉದ್ಯಮಿಗಳ ನಾಡಾದ ಆಂಧ್ರದ ತಿರುಪತಿಯ ತಿಮ್ಮಪ್ಪನ ನೆಲದಲ್ಲಿ ನೆಲೆಯೂರಿ ಅಂದಾಜು 100 ಕೋಟಿ ರೂ. ಬಂಡವಾಳ ಹೂಡಿ ನಿತ್ಯ 1,00,000 ಲಕ್ಷ ಲೀ. ಐಸ್‌ಕ್ರೀಮ್ ಉತ್ಪಾದಿಸುವ ಅತ್ಯಾಧುನಿಕ ಘಟಕವನ್ನು ಇಂದು ಆರಂಭಿಸುತ್ತಿದೆ. ಸ್ವಯಂಚಾಲಿತ, ಸ್ವಚ್ಛ, ಆರೋಗ್ಯಕರ ವಾತಾವರಣದಲ್ಲಿ ಹಾಂಗ್ಯೋ ಬ್ರಾಂಡಿನಲ್ಲಿ ಹೊಸ ಹೊಸ ರುಚಿಯ ಐಸ್‌ಕ್ರೀಮ್‌ಗಳು ನಿತ್ಯ ತಯಾರಾಗುತ್ತವೆ. ಮುಂಬೈ ಸಹಿತ ದಕ್ಷಿಣ ಭಾರತದ 7 ರಾಜ್ಯಗಳಲ್ಲಿ ಹಾಂಗ್ಯೋ ಐಸ್‌ಕ್ರೀಮ್ ವಿತರಣೆಯಾಗುತ್ತಿದ್ದು 30 ಸಾವಿರ ವಿತರಕರಿಗೆ, ಲಕ್ಷಾಂತರ ಐಸ್‌ಕ್ರೀಮ್ ಅಂಗಡಿಕಾರರಿಗೆ, ಒಣ, ತಾಜಾ ಹಣ್ಣು ಬೆಳೆಗಾರರಿಗೆ, ಹಾಲು ಉತ್ಪಾದಕರಿಗೆ ಇದರಿಂದ ಲಾಭವಾಗುತ್ತಿದೆ.

ಸಂಸ್ಥೆಯ ಸ್ಥಾಪಕ ಕಾರ್ಯನಿರ್ವಾಹಕ ಅಧ್ಯಕ್ಷ ದಿನೇಶ ಆರ್. ಪೈ, ಉಪಾಧ್ಯಕ್ಷ ಉಲ್ಲಾಸ ಕಾಮತ, ಸ್ಥಾಪಕ ಆಡಳಿತ ನಿರ್ದೇಶಕ ಜಗದೀಶ ಆರ್. ಪೈ ಮತ್ತು ಸ್ಥಾಪಕ ಆಡಳಿತ ನಿರ್ದೇಶಕ ಪ್ರದೀಪ ಪೈ ಮತ್ತು ಕುಟುಂಬದವರು ಸಂಸ್ಥೆಯನ್ನು ಕರಾವಳಿಯಿಂದ ತಿರುಪತಿಯ ಬೆಟ್ಟದೆತ್ತರಕ್ಕೆ ಬೆಳೆಸಿದ್ದಾರೆ. ಪರ್ತಗಾಳಿ ಶ್ರೀ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಇಂದು ದಿನಾಂಕ 21 ರಂದು ಬೆಳಿಗ್ಗೆ ಹಾಂಗ್ಯೋ ಘಟಕಕ್ಕೆ ಚಾಲನೆ ನೀಡಿ ಹರಸಲಿದ್ದಾರೆ.

ಆಂಧ್ರ ಪ್ರದೇಶದ ಉದ್ಯಮ ಮತ್ತು ವಾಣಿಜ್ಯ ಮಂತ್ರಿ ಟಿ.ಜಿ. ಭರತ್ ಮುಖ್ಯ ಅತಿಥಿಗಳಾಗಿ ಗಣ್ಯ ಅತಿಥಿಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ತಮ್ಮ ಯೌವ್ವನದಲ್ಲಿ ಸಾಹಸ ಆರಂಭಿಸಿದ ಪೈ ಸಹೋದರರು ಈಗ ತಮ್ಮ ಮಕ್ಕಳನ್ನು ಉದ್ಯಮ ಮುನ್ನಡೆಸಲು ತರಬೇತಿಗೊಳಿಸಿದ್ದಾರೆ. ಆರ್.ಎನ್. ಶೆಟ್ಟಿ, ಆರ್.ಪಿ. ಕಾಮತ್ ಗ್ರೂಪ್, ಪೈ ಸಹೋದರರು ಉಕ ಜಿಲ್ಲೆಯ ಹೆಮ್ಮೆ. ಹಾಂಗ್ಯೋ ತಿರುಪತಿ ಬೆಟ್ಟದಿಂದ ಹಿಮಾಲಯದೆತ್ತರಕ್ಕೆ ಏರಲಿ ಎಂದು ಜಿಲ್ಲೆಯ ಗಣ್ಯರು ಹಾರೈಸಿದ್ದಾರೆ.



More Stories
ಮನೆ ಮನೆಗೆ ನಮ್ಮ ಶಾಸಕರು, ಮನೆ ಬಾಗಿಲಿಗೆ ಸರ್ಕಾರ ಕಾರ್ಯಕ್ರಮ ಯಶಸ್ವಿ
ಎಸ್ ಎಸ್ ಎಲ್ ಸಿ ಸಾಧಕರಿಗೆ ಕುಮಟಾ ಡಯಟಿನಿಂದ ಗೌರವಾರ್ಪಣೆ
ಅಯುಷ್ ಶೆಟ್ಟಿಯವರಿಗೆ ಮುಖ್ಯಮಂತ್ರಿಯವರಿಂದ ಗೌರವಾರ್ಪಣೆ