September 8, 2026

ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ಸಮರ್ಪಣೆ, ರಾಕಿ ಕಟ್ಟಿ ಗೌರವಿಸಿದ ಕೆ.ಆರ್.ಪೇಟೆ ಬಿಜೆಪಿ

ಕೃಷ್ಣರಾಜಪೇಟೆ (ಮಂಡ್ಯ): ಗೌರಿ ಗಣೇಶ ಹಬ್ಬ ಹಾಗೂ ರಕ್ಷಾಬಂಧನದ ಅಂಗವಾಗಿ ಕೃಷ್ಣರಾಜಪೇಟೆ ತಾಲೂಕು ಭಾರತೀಯ ಜನತಾ ಪಕ್ಷದ ವತಿಯಿಂದ ಪುರಸಭಾ ಕಾರ್ಯಾಲಯದಲ್ಲಿ ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ಸಮರ್ಪಿಸಿ, ಸ್ವಚ್ಛತಾ ಕಾರ್ಮಿಕರಿಗೆ ರಾಕಿ ಕಟ್ಟುವ ಮೂಲಕ ವಿಶಿಷ್ಟವಾಗಿ ಹಬ್ಬ ಆಚರಿಸಲಾಯಿತು.

ಬಿಜೆಪಿ ತಾಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಹಿಳಾ ಘಟಕದ ಪದಾಧಿಕಾರಿಗಳು ಪಟ್ಟಣದ ನೈರ್ಮಲ್ಯಕ್ಕಾಗಿ ಶ್ರಮಿಸುವ ಪೌರಕಾರ್ಮಿಕರಿಗೆ ರಕ್ಷಾಸೂತ್ರ ಕಟ್ಟಿ ಆಶೀರ್ವಾದ ಪಡೆದರು.

ಮಾಜಿ ಸಚಿವ ಡಾ. ನಾರಾಯಣಗೌಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಮುಂಜಾನೆಯಿಂದಲೇ ಪಟ್ಟಣದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಅವರ ಶ್ರಮವನ್ನು ಗೌರವಿಸಲು ಹಾಗೂ ಬಾಂಧವ್ಯ ವೃದ್ಧಿಸಲು ಈ ಬಾಗಿನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಪರಿಸರ ಇಂಜಿನಿಯರ್ ಪ್ರಿಯಾಂಕ, ಆರೋಗ್ಯ ಪರಿವೀಕ್ಷಕ ಅಶೋಕ್, ಮೇಸ್ತ್ರಿ ಮುತ್ತಣ್ಣ, ಪೌರಕಾರ್ಮಿಕರಾದ ರಾಮು, ಯಶೋದಮ್ಮ, ಗೌರಮ್ಮ, ಬನ್ನಾರಿ, ಗೋವಿಂದ ಹಾಗೂ ಬಿಜೆಪಿ ಮಹಿಳಾ ಘಟಕದ ಪ್ರಮುಖರಾದ ಸರೋಜಾ, ಸುನಂದಮ್ಮ, ಗೀತಾ, ದೇವಮ್ಮ, ಮಹೇಶ್ವರಿ, ಮಂಗಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    About The Author

    error: Content is protected !!