July 15, 2026

ಕಾಸರಕೋಡಿನ ಅಂಗನವಾಡಿ ಮಕ್ಕಳಿಗೆ ‘ಹೊನ್ನಾವರ ಪೋರ್ಟ್ ಲಿಮಿಟೆಡ್’ನಿಂದ ಬ್ಯಾಗ್, ರೈನ್‌ಕೋಟ್ ವಿತರಣೆ

ಹೊನ್ನಾವರ: “ಚಿಕ್ಕ ಮಕ್ಕಳು ದೇವರಿಗೆ ಸಮಾನ. ಅಂತಹ ಮಕ್ಕಳಿಗೆ ಅಂಗನವಾಡಿಯಲ್ಲಿ ಶಿಕ್ಷಕರು ಅಕ್ಷರ ಜ್ಞಾನ ಕಲಿಸುವ ಪವಿತ್ರ ಕೆಲಸ ಮಾಡುತ್ತಿದ್ದಾರೆ” ಎಂದು ಕಾಸರಕೋಡ ಗ್ರಾ. ಪಂ. ಮಾಜಿ ಅಧ್ಯಕ್ಷ ಮಂಜು ಗೌಡ ಹೇಳಿದರು.
ಕಾಸರಕೋಡಿನ ಮಹಾಗಣಪತಿ ನಾರಾಯಣ ಪ್ರಸನ್ನ ದೇವಾಲಯದ ಸಭಾಂಗಣದಲ್ಲಿ ಹೊನ್ನಾವರ ಪೋರ್ಟ್ ಲಿಮಿಟೆಡ್ (HPPL) ಕಂಪನಿಯ ವತಿಯಿಂದ ಕಾಸರಕೋಡ ಗ್ರಾ. ಪಂ. ವ್ಯಾಪ್ತಿಯ ಅಂಗನವಾಡಿ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಬ್ಯಾಗ್ ಮತ್ತು ರೈನ್ ಕೋಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಂಪನಿಯು ಬಂದರು ನಿರ್ಮಾಣದ ಜೊತೆಗೆ ಇಂತಹ ಜನಪರ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಾಮಾಜಿಕ ಕಾಳಜಿಗೆ ನಮ್ಮ ಒತ್ತು: ನಿಲಾಂ ಪಾಯ್ದೆ

ಕಂಪನಿಯ ಪ್ರಮುಖರಾದ ನಿಲಾಂ ಪಾಯ್ದೆ ಮಾತನಾಡಿ, “ನಮ್ಮ ಸಂಸ್ಥೆಯು ಕೇವಲ ಅಭಿವೃದ್ಧಿ ಕಾಮಗಾರಿಗಳಷ್ಟೇ ಅಲ್ಲದೆ ಸಾಮಾಜಿಕ ಕಾಳಜಿಯನ್ನೂ ಹೊಂದಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸಬೇಕಾಗಿದ್ದು, ನಮ್ಮ ಸಂಸ್ಥೆ ಇಂತಹ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ” ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಿ: ಎಚ್. ಎಲ್. ನಗರೆ

ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಎಚ್. ಎಲ್. ನಗರೆ, ಇಂದಿನ ಕಾಲಮಾನದಲ್ಲಿ ಶಿಕ್ಷಣ ಅತ್ಯಂತ ಮುಖ್ಯವಾಗಿದೆ. ಉನ್ನತ ಶಿಕ್ಷಣ ಪಡೆದರೆ ಕೆಲಸಕ್ಕಾಗಿ ಯಾರ ಮುಂದೆಯೂ ಅಂಗಲಾಚುವ ಪರಿಸ್ಥಿತಿ ಬರುವುದಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಲು ಮುಂದೆ ಬರಬೇಕು ಮತ್ತು ಕಂಪನಿ ನೀಡಿದ ಕೊಡುಗೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ತ್ಯಾಗವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ: ರಮೇಶ ಮೇಸ್ತ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಸ್ಕಾಂನ ರಮೇಶ ಮೇಸ್ತ ಮಾತನಾಡಿ, “ಈ ಕಂಪನಿಯು ಕೇವಲ ಬಂದರು ನಿರ್ಮಾಣ ಮಾಡುವುದಷ್ಟೇ ಅಲ್ಲದೆ, ರಕ್ತದಾನ ಶಿಬಿರ, ಪರಿಸರ ದಿನಾಚರಣೆಯಂತಹ ಜನಪರ ಕೆಲಸಗಳನ್ನು ಮಾಡುತ್ತಿದೆ. ಸಣ್ಣ ಮಕ್ಕಳಿಗೆ ಇಂತಹ ಸಹಾಯ ಮಾಡುವುದು ಜ್ಞಾನವನ್ನು ಹಂಚಿದಂತೆ. ನಮ್ಮ ಭಾಗದಲ್ಲಿ ಕಂಪನಿಗಳು ಇಲ್ಲದೆ ಯುವಕರು ಉದ್ಯೋಗಕ್ಕಾಗಿ ಹೊರಗೆ ವಲಸೆ ಹೋಗುತ್ತಿದ್ದಾರೆ. ಈಗ ಬಂದರು ನಿರ್ಮಾಣವಾಗುತ್ತಿರುವುದರಿಂದ ಸ್ಥಳೀಯವಾಗಿ ಉದ್ಯೋಗ ಸಿಗಲಿದೆ. ತ್ಯಾಗ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ, ನಾವೆಲ್ಲರೂ ಇದಕ್ಕೆ ಬೆಂಬಲ ನೀಡಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಂಪನಿಯ ಕೃಷ್ಣ ನಾಯ್ಕ ಹಾಗೂ ಸಿ. ಡಿ. ಪಿ. ಓ ಇಲಾಖೆಯ ಅಕ್ಷತಾ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಈಶ್ವರ್ ಗೌಡ, ಮುಕುಂದ ನಾಯ್ಕ, ಮುರಾರಿ ನಾಯ್ಕ ಉಪಸ್ಥಿತರಿದ್ದರು. ಅಶೋಕ ಕಾಸರಕೋಡ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕಾಸರಕೋಡ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿ ವಿದ್ಯಾರ್ಥಿಗಳಿಗೆ ರೈನ್‌ಕೋಟ್ ಹಾಗೂ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಲಾಯಿತು.

About The Author

error: Content is protected !!