July 25, 2026

ತಟ್ಟಿಹಕ್ಕಲು ದುರಂತ: ಮೃತ ಸಿಬ್ಬಂದಿ ಕುಟುಂಬಕ್ಕೆ ₹1.10 ಲಕ್ಷ ಎಫ್‌ಡಿ, ಶಿಕ್ಷಣದ ಪೂರ್ಣ ಹೊಣೆ ಹೊತ್ತ ಸೇಂಟ್ ಥಾಮಸ್ ಶಾಲೆ!

ಭಟ್ಕಳ: ಪಡುಶಿರಾಲಿ (ತಟ್ಟಿಹಕ್ಕಲು) ಸಮೀಪ ಮೇ 24ರಂದು ಸಂಭವಿಸಿದ್ದ ಭೀಕರ ಸಮುದ್ರ ದುರಂತದಲ್ಲಿ ಮೃತಪಟ್ಟಿದ್ದ ಶಾಲಾ ಸಿಬ್ಬಂದಿ ಲಕ್ಷ್ಮೀ ಶಿವರಾಮ ನಾಯ್ಕ ಅವರ ಕುಟುಂಬಕ್ಕೆ ಶಿರಾಲಿ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆ ಶ್ಲಾಘನೀಯ ಮಾನವೀಯ ನೆರವು ನೀಡಿದೆ.

ಸುಮಾರು 16 ವರ್ಷಗಳ ಕಾಲ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಲಕ್ಷ್ಮೀ ಅವರ ಸೇವೆಯನ್ನು ಸ್ಮರಿಸಿ, ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರ ಸಹಕಾರದಿಂದ ಸಂಗ್ರಹಿಸಿದ ₹1,10,400 ಮೊತ್ತವನ್ನು ಅವರ ಕುಟುಂಬದ ಹೆಸರಿನಲ್ಲಿ ಎಫ್‌ಡಿ ಮಾಡಲಾಗಿದೆ.

ಲಕ್ಷ್ಮೀ ಅವರ ಪುತ್ರ ಎಲ್‌ಕೆಜಿಯಿಂದಲೇ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ 8ನೇ ತರಗತಿಯಲ್ಲಿದ್ದಾನೆ. ಆತನ ಮುಂದಿನ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಶಾಲಾ ಆಡಳಿತ ಮಂಡಳಿಯೇ ವಹಿಸಿಕೊಂಡಿದೆ.

“ಸಂಕಷ್ಟದ ಸಮಯದಲ್ಲಿ ಬೆನ್ನಿಗೆ ನಿಲ್ಲುವುದು ನಮ್ಮ ಬದ್ಧತೆ”:

“ಸಂಕಷ್ಟದ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಅವರ ಕುಟುಂಬದ ಬೆನ್ನಿಗೆ ನಿಲ್ಲುವುದು ಶಾಲೆಯ ಸಾಮಾಜಿಕ ಬದ್ಧತೆಯಾಗಿದೆ. ಲಕ್ಷ್ಮೀ ಶಿವರಾಮ ನಾಯ್ಕ ಅವರ ಸೇವೆ ಸದಾ ಸ್ಮರಣೀಯ. ಅವರ ಕುಟುಂಬದ ಭವಿಷ್ಯ ಹಾಗೂ ಶಿಕ್ಷಣಕ್ಕೆ ಶಾಲೆಯ ಸಂಪೂರ್ಣ ಬೆಂಬಲ ಸದಾ ಇರಲಿದೆ.”
ಶಾಲಾ ಆಡಳಿತ ಮಂಡಳಿ

ಈ ನೆರವು ಹಸ್ತಾಂತರ ಹಾಗೂ ಪ್ರಕಟಣೆ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸ್ಯಾಮ್ಯುಯೆಲ್ ವರ್ಗೀಸ್, ಸಹ ಶಿಕ್ಷಕರಾದ ಸಿಜೋ ಸ್ಯಾಮ್ಯುಯೆಲ್, ಸಿಂಟೋ ಸ್ಯಾಮ್ಯುಯೆಲ್, ಚಂದ್ರಾವತಿ ನಾಯ್ಕ, ಜಯಶ್ರೀ ನಾಯ್ಕ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಯೋಧನ್ ಮೊಗೇರ್ ಮತ್ತು ಪಂಚಮಿ ಶೆಟ್ಟಿ ಉಪಸ್ಥಿತರಿದ್ದರು.

About The Author

error: Content is protected !!