August 23, 2026

ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ: ಶ್ರೀಧರ ಶೇಟ್ ಶಿರಾಲಿ

ಭಟ್ಕಳ: ಗುರುಪೂರ್ಣಿಮೆ ಕೇವಲ ಹಬ್ಬವಲ್ಲ; ಗುರು-ಶಿಷ್ಯರ ಪವಿತ್ರ ಬಾಂಧವ್ಯವನ್ನು ಸ್ಮರಿಸುವ ಹಾಗೂ ಗುರುವಿಗೆ ಗೌರವ ಸಲ್ಲಿಸುವ ದಿನವಾಗಿದೆ ಎಂದು ಸಾಹಿತಿ ಶ್ರೀಧರ ಶೇಟ್ ಶಿರಾಲಿ ಹೇಳಿದರು.
ಜಾಲಿಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಯೋಗ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಜ್ಞಾನದ ಬೆಳಕಿನತ್ತ ಕರೆದೊಯ್ಯುವ ಶಕ್ತಿ:

ಅಜ್ಞಾನದ ಕತ್ತಲೆಯಿಂದ ಜ್ಞಾನ, ಸುಜ್ಞಾನ ಮತ್ತು ವಿಜ್ಞಾನದ ಬೆಳಕಿನತ್ತ ಕರೆದೊಯ್ಯುವ ಗುರುವಿನ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ವೇದವ್ಯಾಸರು ಭಾರತೀಯ ಜ್ಞಾನಪರಂಪರೆಯ ಮಹಾನ್ ವ್ಯಕ್ತಿಯಾಗಿದ್ದು, ವೇದಗಳನ್ನು ವ್ಯವಸ್ಥಿತಗೊಳಿಸಿ ಮಹಾಭಾರತ ಹಾಗೂ ಪುರಾಣಗಳ ಮೂಲಕ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸಿದವರು. ತಾಯಿಯ, ತಂದೆಯ, ಗುರುವಿನ ಹಾಗೂ ಸಮಾಜದ ಋಣವನ್ನು ಪ್ರತಿಯೊಬ್ಬರೂ ಸಾರ್ಥಕ ಬದುಕಿನ ಮೂಲಕ ತೀರಿಸಬೇಕಿದೆ ಎಂದು ಶ್ರೀಧರ ಶೇಟ್ ಹೇಳಿದರು. ಇದೇ ವೇಳೆ ಅವರು ಯೋಗಗುರು ಗೋವಿಂದ ಗುರೂಜಿಯವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.

ಯುವಜನತೆಯಲ್ಲಿ ಮೊಬೈಲ್ ವ್ಯಸನ ಆತಂಕಕಾರಿ:

ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿ, ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಭಾಷ್ ಶೆಟ್ಟಿ ಮಾತನಾಡಿ, “ಗುರು ಬದುಕಿನ ಮಾರ್ಗದರ್ಶಿಯಾಗಿದ್ದು, ಅವರಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಇಂದಿನ ಯುವಜನತೆ ಮೊಬೈಲ್ ವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ” ಎಂದು ಕಳವಳ ವ್ಯಕ್ತಪಡಿಸಿದರು.

ಗುರುವಿಗೆ ಶರಣಾದಾಗಲೇ ಬದುಕು ಸಾರ್ಥಕ:

ಯೋಗಗುರು ಗೋವಿಂದ ಗುರೂಜಿ ಮಾತನಾಡಿ, ಗುರುವಿಗೆ ಶರಣಾದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ವಿಜೃಂಭಣೆಯ ಗುರುಪೂರ್ಣಿಮೆ ಆಚರಣೆ:

ಆರಂಭದಲ್ಲಿ ವೇದವ್ಯಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಜನೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಟ್ಕಳ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಯೋಗಾಭ್ಯಾಸಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

About The Author

error: Content is protected !!