

ಭಟ್ಕಳ: ಮತ್ತೊಬ್ಬರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಕೋಮು ಪ್ರಚೋದಕ ಸಂದೇಶಗಳನ್ನು ಹರಡುತ್ತಿದ್ದ ಯುವಕನೊಬ್ಬನನ್ನು ಸೈಬರ್ ತಂತ್ರಜ್ಞಾನದ ನೆರವಿನಿಂದ ಭಟ್ಕಳ ಪೊಲೀಸರು ಪತ್ತೆಹಚ್ಚಿದ್ದು, ಆತನ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಿದ್ದಾರೆ.
ಉತ್ತರಕೊಪ್ಪ ನಿವಾಸಿ, ವೃತ್ತಿಯಲ್ಲಿ ಶಿಲ್ಪಿ ಕೆಲಸ ಮಾಡಿಕೊಂಡಿರುವ ಈಶ್ವರ ಕೃಷ್ಣ ನಾಯ್ಕ (28) ಪೊಲೀಸರ ಬಲೆಗೆ ಬಿದ್ದ ಯುವಕ.

ಆರೋಪಿಯು ‘ರೋಹಿತ್ ಶೆಟ್ಟಿ’ ಎಂಬ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು, ಭಟ್ಕಳದ ಮರಿನಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಅನ್ಯಕೋಮಿನವರ ವಿರುದ್ಧ ಪ್ರಚೋದನಕಾರಿ ಬರಹಗಳು ಹಾಗೂ ಸಂದೇಶಗಳನ್ನು ಪ್ರಕಟಿಸುತ್ತಿದ್ದ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ನಿರಂತರ ನಿಗಾ ವಹಿಸಿದ್ದಾಗ ಈ ಖಾತೆಯ ಅನುಮಾನಾಸ್ಪದ ಚಟುವಟಿಕೆಗಳು ಗಮನಕ್ಕೆ ಬಂದಿದ್ದವು. ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು, ಸೈಬರ್ ತಂತ್ರಜ್ಞಾನದ ನೆರವಿನಿಂದ ಖಾತೆಯ ಮೂಲವನ್ನು ಪತ್ತೆಹಚ್ಚಿ ಆರೋಪಿಯನ್ನು ಗುರುತಿಸಿದ್ದಾರೆ. ತನಿಖೆಯ ಭಾಗವಾಗಿ ಆತನ ಬಳಿಯಿದ್ದ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.

ವಿಚಾರಣೆಗೆ ನೋಟಿಸ್:
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ನಿಂದ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಪರಿಶೀಲಿಸಲಾಗುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ನೋಟಿಸ್ ನೀಡಲಾಗುವುದು ಹಾಗೂ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ