August 23, 2026

ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಮಂಕಾಳ ವೈದ್ಯ ಮಾರ್ಮಿಕ ಪ್ರತಿಕ್ರಿಯೆ: ‘ಜನರೇ ಉತ್ತರ ನೀಡುತ್ತಾರೆ’ ಎಂದ ಭಟ್ಕಳ ಶಾಸಕ!

ಭಟ್ಕಳ / ಬೆಂಗಳೂರು: ಡಿ.ಕೇ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಿಂದ ಕೊನೆಯ ಗಳಿಗೆಯಲ್ಲಿ ಹೆಸರು ಕೈತಪ್ಪಿದ ಬೆನ್ನಲ್ಲೇ ಭಟ್ಕಳ ಶಾಸಕ ಹಾಗೂ ಮಾಜಿ ಸಚಿವ ಮಂಕಾಳ ವೈದ್ಯ ತಮ್ಮ ಮುಂದಿನ ನಿಲುವು ಮತ್ತು ಘಟನಾವಳಿಗಳ ಕುರಿತು ತೀವ್ರ ಬೇಸರದಿಂದಲೇ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಪುಟದಲ್ಲಿ ಸ್ಥಾನ ಸಿಗದಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೊನೆಯ ಕ್ಷಣದಲ್ಲಿ ನಡೆದ ಗೊಂದಲಗಳನ್ನು ಬಿಚ್ಚಿಟ್ಟಿದ್ದಾರೆ.

‘ಪ್ರಮಾಣವಚನಕ್ಕೆ ಕರೆದು ನಂತರ ಹೆಸರು ಕೈಬಿಟ್ಟರು!’ “ನನ್ನ ಅವಶ್ಯಕತೆ ಸಂಪುಟಕ್ಕೆ ಇರಲಿಲ್ಲವೇನೋ, ಅದಕ್ಕಾಗಿಯೇ ನನ್ನ ಹೆಸರು ಕೈಬಿಟ್ಟಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಸ್ವತಃ ಸಿಎಂ ಕರೆ ಮಾಡಿ ಪ್ರಮಾಣವಚನಕ್ಕೆ ಬನ್ನಿ ಎಂದು ತಿಳಿಸಿದ್ದರು. ಆದರೆ 11 ಗಂಟೆಗೆ ಮತ್ತೆ ಕರೆ ಮಾಡಿ, ನಿಮ್ಮ ಹೆಸರು ಕೈಬಿಟ್ಟು ಮಲ್ಲಣ್ಣ (ಎಸ್.ಎಸ್. ಮಲ್ಲಿಕಾರ್ಜುನ್) ಅವರಿಗೆ ಅವಕಾಶ ನೀಡುತ್ತಿದ್ದೇವೆ ಎಂದರು. ಆ ಒಂದು ಗಂಟೆಯ ನಡುವೆ ಏನೇನು ರಾಜಕೀಯ ಬೆಳವಣಿಗೆ ಆಯಿತೋ ನನಗೆ ಗೊತ್ತಿಲ್ಲ,” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಮೂರು ವರ್ಷದ ಕೆಲಸವೇ ನನಗೆ ತೃಪ್ತಿ’ “ಕಳೆದ ಮೂರು ವರ್ಷಗಳ ಕಾಲ ಮೀನುಗಾರಿಕೆ ಮತ್ತು ಬಂದರು ಸಚಿವರಾಗಿ ಯಾವುದೇ ಕೆಟ್ಟ ಹೆಸರು ತಂದುಕೊಳ್ಳದೆ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಕರಾವಳಿ ಮತ್ತು ಮೀನುಗಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ನನಗೆ ಅಷ್ಟು ಸಾಕು,” ಎಂದು ತಮ್ಮ ಆಡಳಿತಾವಧಿಯನ್ನು ಸ್ಮರಿಸಿಕೊಂಡರು.

ಕರಾವಳಿಗೆ ಅನ್ಯಾಯ: ಜನರೇ ನಿರ್ಧರಿಸಲಿದ್ದಾರೆ! ಉತ್ತರ ಕನ್ನಡ ಜಿಲ್ಲೆ ಹಾಗೂ ಕರಾವಳಿ ಭಾಗಕ್ಕೆ ಸಂಪುಟದಲ್ಲಿ ಅನ್ಯಾಯವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಯಾರಿಗೆ ಅನ್ಯಾಯವಾಗಿದೆ, ಯಾವ ಭಾಗಕ್ಕೆ ಅನ್ಯಾಯವಾಯಿತು ಎಂಬುದನ್ನು ನಾವು ಬಾಯಲ್ಲಿ ಹೇಳಿದರೆ ಅದು ಮಾತಲ್ಲೇ ಉಳಿಯುತ್ತದೆ. ಅದಕ್ಕೆ ಆ ಭಾಗದ ಜನರೇ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡುತ್ತಾರೆ,” ಎಂದು ರಾಜಕೀಯವಾಗಿ ಮಹತ್ವದ ಸುಳಿವು ನೀಡಿದ್ದಾರೆ.

ಮುಂದಿನ ಹೆಜ್ಜೆ ಏನು? ತಕ್ಷಣಕ್ಕೆ ಯಾವುದೇ ರಾಜೀನಾಮೆ ಅಥವಾ ಬಹಿರಂಗ ಬಂಡಾಯದ ನಿರ್ಧಾರ ಪ್ರಕಟಿಸದಿದ್ದರೂ, ಶಾಸಕರಾಗಿ ಕ್ಷೇತ್ರದಲ್ಲಿದ್ದುಕೊಂಡೇ ಪಕ್ಷದ ಹೈಕಮಾಂಡ್ ನಡೆಗೆ ತಮ್ಮ ಬೆಂಬಲಿಗರು ಹಾಗೂ ಮೀನುಗಾರ ಸಮುದಾಯದಲ್ಲಿರುವ ಆಕ್ರೋಶವನ್ನು ತಲುಪಿಸುವ ಸೂಚನೆ ನೀಡಿದ್ದಾರೆ. ಕರಾವಳಿಯ ಏಕೈಕ ಮೀನುಗಾರ ನಾಯಕನಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಭಟ್ಕಳ ಮತ್ತು ಉತ್ತರ ಕನ್ನಡದಾದ್ಯಂತ ಕಾರ್ಯಕರ್ತರ ಪ್ರತಿಭಟನೆ ಮುಂದುವರಿದಿದೆ.

About The Author

error: Content is protected !!