August 25, 2026

ಭಟ್ಕಳದಲ್ಲಿ ಅದ್ದೂರಿ ಮೀಲಾದ್ ಮೆರವಣಿಗೆ

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರ 1501ನೇ ಜಯಂತಿ ಅಂಗವಾಗಿ ಭಟ್ಕಳ ಮರ್ಕಝಿ ಮೀಲಾದ್ ಕಮಿಟಿ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಮೀಲಾದ್ ಮೆರವಣಿಗೆ ನಡೆಯಿತು.


ಈದ್ ಮಿಲಾದುನ್ನಬಿ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಫೈಝೆ ರಸೂಲ್, ಬಝ್ಮೆ ಫೈಝೆ ರಸೂಲ್, ತಾಜುಶ್ಶುನ್ನತ್, ಎಸ್‌ಎಸ್‌ಎಫ್ ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಾರು ಮಂದಿ ಪಾಲ್ಗೊಂಡರು.
ಬಂದರ್ ರಸ್ತೆಯ ಈದ್ಗಾ ಮೈದಾನದಿಂದ ಆರಂಭಗೊಂಡ ಮೆರವಣಿಗೆ ಶಮ್ಸುದ್ದೀನ್ ವೃತ್ತ, ಅರ್ಬನ್ ಬ್ಯಾಂಕ್, ಸುಲ್ತಾನ್ ಸ್ಟ್ರೀಟ್, ಚೌಕ್ ಬಜಾರ್ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಹಳೆ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಮೈದಾನದಲ್ಲಿ ಮುಕ್ತಾಯಗೊಂಡಿತು.


ಮೆರವಣಿಗೆಯಲ್ಲಿ ಪಾಲ್ಗೊಂಡವರು ಪ್ರವಾದಿ ಮುಹಮ್ಮದ್ ಅವರ ಸಂದೇಶ ಸಾರುವ ಬಾವುಟಗಳು ಹಾಗೂ ಧರ್ಮಧ್ವಜಗಳನ್ನು ಹಿಡಿದು ಸಾಗಿದರು. ಮಕ್ಕಳ ನೃತ್ಯ, ಕವಾಯತು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮೆರವಣಿಗೆಯುದ್ದಕ್ಕೂ ಪ್ರವಾದಿಯವರ ಸಂದೇಶ ಸಾರುವ ಹಾಡುಗಳನ್ನು ಹಾಡಲಾಯಿತು. ಧಾರ್ಮಿಕ ಸ್ತಬ್ಧಚಿತ್ರ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.


ಮರ್ಕಝಿ ಮೀಲಾದ್ ಕಮಿಟಿಯ ಸಂಚಾಲಕ ಮುನೀರ್ ಅಹ್ಮದ್ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಖಾಜಾ ಹಸನ್ ಕಲಾಯಿವಾಲೆ, ಅಬ್ದುಲ್ ಅಲೀಮ್ ಗವಾಯಿ, ಇಸ್ಮಾಯಿಲ್ ಹಬೀಬುಲ್ಲಾಹ್, ಡಾ. ಯಾಹ್ಯಾ ಅಸ್ಕರಿ, ಆಸಿಫ್ ಇಕ್ಬಾಲ್ ಕಲಾಯಿವಾಲೆ, ಇದ್ರೀಸ್ ಮೊಹತೆಶಂ ರೊಡ್ಡ, ಮೌಲಾನಾ ಫೈಝಾನ್ ರಝಾ, ನವಾಝ್ ಶಿರಾಲಿ, ಶಫೀಖ್ ಬ್ಯಾರಿ, ಅಶ್ರಫ್ ತೋನ್ಸೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್: ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ ಎಂ.ಎನ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್, ಸಿಪಿಐ ದಿವಾಕರ ಪಿ.ಎಂ., ಗ್ರಾಮೀಣ ಠಾಣೆ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್ ಹಾಗೂ ನಗರ ಠಾಣೆ ಪಿಎಸ್ಐ ನವೀನ್ ಎಸ್. ನಾಯ್ಕ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

About The Author

error: Content is protected !!