September 8, 2026

ಯಾವ ಸಂಪತ್ತೂ ನೀಡದ ಸಂತೃಪ್ತಿಯನ್ನು ಅನ್ನ ನೀಡುತ್ತದೆ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

ಗೋಕರ್ಣ: ಅನ್ನ ಹಾಗೂ ಅಮ್ಮ ಎರಡಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ದೇಹದ ಒಳಗೂ ಹೋಗಿ ನಮ್ಮನ್ನು ಪೋಷಿಸುವ ಶಕ್ತಿ ಆಹಾರಕ್ಕೆ ಮಾತ್ರವಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.

ಅನ್ನದ ದೈವತ್ವ ಹಾಗೂ ಮಹತ್ವ: ಸ್ಥೂಲ ದೃಷ್ಟಿಯಲ್ಲಿ ಆಹಾರವು ಕೇವಲ ಹೊಟ್ಟೆ ತುಂಬಿಸುವ ಊಟವಾದರೆ, ಸೂಕ್ಷ್ಮ ದೃಷ್ಟಿಗೆ ಅದು ಪರಮಾತ್ಮನ ಸ್ವರೂಪ ಹಾಗೂ ಅನ್ನಪೂರ್ಣೇಶ್ವರಿಯಾಗಿದೆ. ಸಂಪತ್ತಿನ ವಿಚಾರದಲ್ಲಿ ಮನುಷ್ಯ ಎಂದಿಗೂ ಸಾಕು ಎನ್ನುವುದಿಲ್ಲ, ಆದರೆ ಆಹಾರದ ವಿಷಯದಲ್ಲಿ ಸಂತೃಪ್ತಿಯಿಂದ ‘ಸಾಕು’ ಎನ್ನುತ್ತಾನೆ. ನೆಮ್ಮದಿ ನೀಡುವುದು ದೇವರ ಲಕ್ಷಣವಾಗಿದ್ದು, ಅನ್ನದಲ್ಲೂ ಪರಮಾತ್ಮನ ಅನೇಕ ಲಕ್ಷಣಗಳಿವೆ ಎಂದು ಶ್ರೀಗಳು ವಿವರಿಸಿದರು.

ಗುರುಭಿಕ್ಷಾ ಸೇವೆ: ಲಕ್ಷ್ಮೀನಾರಾಯಣ ಪಕಳಕುಂಜ ಕುಟುಂಬದವರಿಂದ ಗುರುಭಿಕ್ಷಾ ಸೇವೆ ನೆರವೇರಿತು. ದಿನಪ್ರಧಾನರಾಗಿ ಡಾ. ಪುರುಷೋತ್ತಮ ಭಟ್ ದಂಪತಿಗಳು ಹಾಗೂ ಪ್ರಮುಖ ಗಣ್ಯರು ಭಾಗವಹಿಸಿದ್ದರು.

ಅಮ್ಮಕೊಡವ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಶ್ರೀಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುತ್ತಿರುವ ಅಮ್ಮಕೊಡವ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಸಮಾಜದ ಅಧ್ಯಕ್ಷ ಬಾಣಂಡ ಎನ್. ಪ್ರಥ್ಯು, ಬಿ. ಎಸ್. ರಘು, ಬಿ. ಎಸ್. ಪ್ರವೀಣ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.

ಸಮಾರಂಭದಲ್ಲಿ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ, ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ ಹಾಗೂ ಶಿವಮೊಗ್ಗ ಹವ್ಯಕ ಸಂಘದ ಅಧ್ಯಕ್ಷ ಪೂರ್ಣಾನಂದ ಉಪಸ್ಥಿತರಿದ್ದರು.

About The Author

error: Content is protected !!