September 20, 2026

ಚಿತ್ರಾಪುರದ ಅಂಗಳದಿಂದ ದಾದಾಸಾಹೇಬ್ ಫಾಲ್ಕೆ ಗೌರವದವರೆಗೆ: ಅನಂತ ನಾಗ್ ಅವರ ಅಪೂರ್ವ ಕಲಾಯಾನ

ಭಟ್ಕಳ: ಕನ್ನಡ ಚಿತ್ರರಂಗದ ಸಹಜ ಅಭಿನಯದ ಮೇರು ಕಲಾವಿದ ಶ್ರೀ ಅನಂತ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಿಗೆ ಹಾಗೂ ಉತ್ತರ ಕನ್ನಡದ ಕಲಾಭಿಮಾನಿಗಳಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಈ ದೀರ್ಘ ಕಲಾಯಾನಕ್ಕೆ ರಾಷ್ಟ್ರೀಯ ಗೌರವವನ್ನು ಸಲ್ಲಿಸಲಾಗಿದೆ.

ಚಿತ್ರಾಪುರ ಮತ್ತು ಮಲ್ಲಾಪುರದ ಬಾಲ್ಯದ ನೆನಪುಗಳು: ಅನಂತ ನಾಗ್ ಅವರ ವ್ಯಕ್ತಿತ್ವ ರೂಪುಗೊಂಡಿದ್ದು ಚಿತ್ರಾಪುರ ಮಠ ಮತ್ತು ಆನಂದಾಶ್ರಮದ ಆಧ್ಯಾತ್ಮಿಕ ಪರಿಸರದಲ್ಲಿ. ಮಠದಲ್ಲಿ ಶ್ಲೋಕ, ಸಂಧ್ಯಾವಂದನೆ, ಗಣಪತಿ ಅಥರ್ವಶೀರ್ಷ ಕಲಿತರೆ, ಆನಂದಾಶ್ರಮದಲ್ಲಿ ಭಜನೆ ಹಾಗೂ ಸಂಗೀತದ ಸಂಸ್ಕಾರ ಅವರಿಗೆ ದೊರೆತಿತ್ತು. ಚಿತ್ರಾಪುರ-ಶಿರಾಲಿಯ ಜೊತೆಗೆ ಮಲ್ಲಾಪುರದಲ್ಲಿದ್ದ ತಂದೆಯ ಮನೆಯ ನೆನಪುಗಳೂ ಅವರ ಹಾಗೂ ಸಹೋದರ ಶಂಕರ್ ನಾಗ್ ಅವರ ಬಾಲ್ಯದೊಂದಿಗೆ ಬೆಸೆದುಕೊಂಡಿವೆ.

ಐದು ದಶಕಗಳ ಅಪೂರ್ವ ಕಲಾಯಾನ: 18ನೇ ವಯಸ್ಸಿನಲ್ಲಿ ರಂಗಭೂಮಿಯಿಂದ ಅಭಿನಯ ಪಯಣ ಆರಂಭಿಸಿದ ಅವರು, ‘ಬಯಲು ದಾರಿ’, ‘ಚಂದನದ ಗೊಂಬೆ’, ‘ನಾ ನಿನ್ನ ಬಿಡಲಾರೆ’, ‘ಬೆಂಕಿಯ ಬಲೆ’, ‘ಆಕ್ಸಿಡೆಂಟ್’, ‘ಗಣೇಶನ ಮದುವೆ’ ಹಾಗೂ ಕಿರುತೆರೆಯ ‘ಮಾಲ್ಗುಡಿ ಡೇಸ್’ ನಂತಹ ಪ್ರಸಿದ್ಧ ಚಿತ್ರಗಳು/ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚೆಗೆ 2025ರಲ್ಲಿ ಅವರಿಗೆ ‘ಪದ್ಮಭೂಷಣ’ ಗೌರವವೂ ಲಭಿಸಿತ್ತು.

ಬೇರುಗಳನ್ನು ಮರೆಯದ ಸರಳತೆ: ಮೇರು ನಟರಾಗಿದ್ದರೂ ಚಿತ್ರಾಪುರ ಮಠ ಹಾಗೂ ಶ್ರೀ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳೊಂದಿಗೆ ನಿರಂತರ ನಂಟು ಕಾಯ್ದುಕೊಂಡಿರುವ ಅನಂತ ನಾಗ್, ಮಠಕ್ಕೆ ಆಗಾಗ್ಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ.

    ಚಿತ್ರಾಪುರದ ಮಣ್ಣಿನಿಂದ ಆರಂಭಗೊಂಡು ರಾಷ್ಟ್ರಮಟ್ಟದ ಅತ್ಯುನ್ನತ ಕಲಾ ಗೌರವದವರೆಗೆ ತಲುಪಿರುವ ಭಟ್ಕಳ ಮೂಲದ ಅನಂತ ನಾಗ್ ಅವರ ಈ ಸಾಧನೆಗೆ ಇಡೀ ಕರಾವಳಿ ಹಾಗೂ ಕಲಾಭಿಮಾನಿ ಬಳಗದಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಕೆಯಾಗಿವೆ.           ಲೇಖನ  : ಉಮೇಶ ಮುಂಡಳ್ಳಿ

    About The Author

    error: Content is protected !!