ಕಾಗವಾಡ: ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಅಳವಡಿಸಿರುವ ಎಚ್ಚರಿಕೆ ಫಲಕವು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದು, ವಾಸ್ತವದಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ.
“ಸಾರ್ವಜನಿಕರಿಗೆ ಸೂಚನೆ: ಇಲ್ಲಿ ಕಸವನ್ನು ಯಾರೂ ಹಾಕಬಾರದು, ಕಸ ಹಾಕಿದರೆ ₹500 ದಂಡ ವಿಧಿಸಲಾಗುವುದು” ಎಂದು ಬೋರ್ಡ್ನಲ್ಲಿ ಬರೆಯಲಾಗಿದ್ದರೂ, ಸಾರ್ವಜನಿಕರು ಅದೇ ಬೋರ್ಡ್ನ ಕೆಳಗೆ ಕಸ ಚೆಲ್ಲುತ್ತಿರುವುದು ಆಡಳಿತದ ವಿಫಲತೆಗೆ ಸಾಕ್ಷಿಯಾಗಿದೆ.
ಎಚ್ಚರಿಕೆ ಫಲಕದ ಕೆಳಗೆ ತ್ಯಾಜ್ಯದ ರಾಶಿ: ಗ್ರಾಮ ಪಂಚಾಯತಿ ಹಾಕಿರುವ ಬೋರ್ಡ್ನ ಕೆಳಭಾಗದಲ್ಲೇ ಪ್ಲಾಸ್ಟಿಕ್ ಚೀಲಗಳು, ಅಪಾಯಕಾರಿ ಹಾಗೂ ಗಲೀಜು ತ್ಯಾಜ್ಯಗಳು ರಾಶಿ ಬಿದ್ದಿವೆ. ಬೋರ್ಡ್ ಹಾಕಿ ಅಧಿಕಾರಿಗಳು ಕೈತೊಳೆದುಕೊಂಡಿದ್ದರೆ, ಸಾರ್ವಜನಿಕರು ಯಾವುದೇ ಭಯವಿಲ್ಲದೆ ಕಸ ಎಸೆಯುತ್ತಿದ್ದಾರೆ.
ದಂಡದ ನಿಯಮ ಹೆಸರಿಗಷ್ಟೇ: ₹500 ದಂಡ ವಿಧಿಸುವ ನಿಯಮ ಕೇವಲ ಬೋರ್ಡ್ಗೆ ಸೀಮಿತವೇ ಹೊರತು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ’ ಕಲ್ಪನೆಗೂ ಇದು ಹಿನ್ನಡೆಯುಂಟುಮಾಡಿದೆ.

ಸಾಂಕ್ರಾಮಿಕ ರೋಗದ ಭೀತಿ: ಈ ರೀತಿ ಕಸದ ರಾಶಿ ಬಿದ್ದಿರುವುದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದ್ದು, ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO), ಆಡಳಿತ ಮಂಡಳಿ ಹಾಗೂ ತಾಲೂಕು ಆಡಳಿತ ತಕ್ಷಣ ಜಾಗೃತರಾಗಬೇಕು. ಬೋರ್ಡ್ ಕೆಳಗೆ ಬಿದ್ದಿರುವ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಿ, ಸ್ವಚ್ಛತೆ ಕಾಪಾಡಬೇಕು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
About The Author


More Stories