ಮಡಿಕೇರಿ: ನಗರದ ಸಂಪಿಗೆಕಟ್ಟೆ ಮೂಲಕ ಮಹದೇವಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಒಟ್ಟು ₹85 ಲಕ್ಷ ವೆಚ್ಚದಲ್ಲಿ ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ನಿರ್ಮಿಸಲಾದ 80 ಮೀಟರ್ ಕಾಂಕ್ರೀಟ್ ರಸ್ತೆಯನ್ನು ಶಾಸಕರಾದ ಡಾ. ಮಂತರ್ ಗೌಡ ಅವರು ಉದ್ಘಾಟಿಸಿದರು.
ಕಾಮಗಾರಿಯ ಗುಣಮಟ್ಟವನ್ನು ಸ್ವತಃ ಪರಿಶೀಲಿಸುವ ಉದ್ದೇಶದಿಂದ ಶಾಸಕರು ದ್ವಿಚಕ್ರ ವಾಹನ ಚಲಾಯಿಸಿ ರಸ್ತೆ ವೀಕ್ಷಣೆ ನಡೆಸಿದರು. ಉಳಿದ ಭಾಗದ ದುರಸ್ತಿ ವೇಳೆ ಎರಡೂ ಬದಿಗಳಲ್ಲಿ ವೆಟ್ ಮಿಕ್ಸ್ ಅಳವಡಿಸಿ, ತದನಂತರವೇ ಡಾಮರೀಕರಣ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಸುಸಜ್ಜಿತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಗುತ್ತಿಗೆದಾರರು, ನಗರಸಭಾ ಪೌರಾಯುಕ್ತರು ಹಾಗೂ ಇಂಜಿನಿಯರ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ, “ಕಳೆದ 25 ವರ್ಷಗಳಿಂದ ಈ ಸಂಪರ್ಕ ರಸ್ತೆಯಲ್ಲಿ ಕೇವಲ ದುರಸ್ತಿ ಕಾರ್ಯಗಳಷ್ಟೇ ನಡೆಯುತ್ತಿದ್ದವು. ಇದೀಗ ಶಾಸಕರ ವಿಶೇಷ ಪ್ರಯತ್ನದಿಂದಾಗಿ ಸರ್ವಋತು ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ” ಎಂದು ಸಾರ್ವಜನಿಕರ ಪರವಾಗಿ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಪೌರಾಯುಕ್ತ ಹೆಚ್.ಆರ್. ರಮೇಶ್, ವಾರ್ಡ್ ಸದಸ್ಯ ಕೆ.ಎಸ್. ರಮೇಶ್, ಮೂಡಾ ಅಧ್ಯಕ್ಷ ಬಿ.ವೈ. ರಾಜೇಶ್, ನಾಮನಿರ್ದೇಶಿತ ಸದಸ್ಯರಾದ ಸದಾ ಮುದ್ದಪ್ಪ, ಮುತ್ತುರಾಜ್, ಕಾಂಗ್ರೆಸ್ ಮುಖಂಡರು ಹಾಗೂ ಸಂಪಿಗೆಕಟ್ಟೆ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ
About The Author


More Stories
ಮಡಿಕೇರಿ ದಸರಾ: ಕೆಎಸ್ಆರ್ಟಿಸಿಯಿಂದ ಇದೇ ಮೊದಲ ಬಾರಿಗೆ ವಿಶೇಷ ಪ್ಯಾಕೇಜ್ ಟೂರ್
‘ಸಮಸ್ತ’ ಆ್ಯಪ್ ತಾಂತ್ರಿಕ ದೋಷ ಖಂಡಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ: ಕಾನೂನು ಸುವ್ಯವಸ್ಥೆ ಪಾಲನೆಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ