
ಕೆ.ಆರ್. ಪೇಟೆ (ಮಂಡ್ಯ): ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಆವರಣದಲ್ಲಿ ಕೃಷಿಕ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ₹೩೨ ಲಕ್ಷ ಅನುದಾನವನ್ನು ಕೇಂದ್ರ ಹಾಗೂ ರಾಜ್ಯ ಕೃಷಿಕ ಸಮಾಜದ ವತಿಯಿಂದ ನೀಡಲಾಗುವುದು ಎಂದು ಆಡಳಿತಾತ್ಮಕ ಅಧ್ಯಕ್ಷ ನಗರ ಮಹದೇವಪ್ಪ ಪ್ರಕಟಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಟ್ಟಡ ನಿರ್ಮಾಣ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ನಿವೇಶನದ ಆರಂಭಿಕ ಕಾರ್ಯಗಳಿಗೆ ₹೧೦ ಲಕ್ಷ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ₹೨೨ ಲಕ್ಷ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ರೈತರಿಗೆ ತರಬೇತಿ ಹಾಗೂ ಮಾಹಿತಿ ಕೇಂದ್ರ: “ಕೃಷಿಕ ಸಮಾಜದ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವುದು, ಅಗತ್ಯ ಮೂಲಭೂತ ಸೌಕರ್ಯಗಳು, ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವುದು ನಮ್ಮ ಉದ್ದೇಶ. ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಮಾರುಕಟ್ಟೆ ಮಾಹಿತಿಯ ತರಬೇತಿ ನೀಡಲು ಈ ಕಟ್ಟಡ ಸಹಕಾರಿಯಾಗಲಿದೆ. ರೈತರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎನ್.ಎಸ್. ಗಂಗಾಧರ್ ಮಾತನಾಡಿ, “ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ರೈತರ ಜಮೀನು ಹಾಗೂ ತೋಟಗಳಲ್ಲೇ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ರೈತರು ಸಾವಯವ ಕೃಷಿಯತ್ತ ಒಲವು ತೋರಿ, ಹೆಚ್ಚಿನ ಆದಾಯ ಗಳಿಸಿ ಉತ್ತಮ ಜೀವನ ನಡೆಸಬೇಕು” ಎಂದರು.
ಇದೇ ವೇಳೆ ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಕಾಂಚನಾ ಅವರು ಎಪಿಎಂಸಿಯ ಪ್ರಸ್ತುತ ಸ್ಥಿತಿಗತಿ ಹಾಗೂ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು. ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾರುಕಟ್ಟೆ ಅಧಿಕಾರಿಗಳಿಗೆ ಮಹದೇವಪ್ಪ ಸೂಚಿಸಿದರು.
ಕಾರ್ಯಕ್ರಮದಲ್ಲಿ ಮೊಸಳೆಕೊಪ್ಪಲಿನ ರೈತ ಮುಖಂಡ ಬೋರೇಗೌಡ, ಮುಖಂಡ ಶಿವಕುಮಾರ್, ನಿವೃತ್ತ ಪ್ರಾಂಶುಪಾಲ ಕೆ. ಕಾಳೇಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

More Stories
ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ಸಮರ್ಪಣೆ, ರಾಕಿ ಕಟ್ಟಿ ಗೌರವಿಸಿದ ಕೆ.ಆರ್.ಪೇಟೆ ಬಿಜೆಪಿ
ಕ್ರೈಸ್ಟ್ ದಿ ಕಿಂಗ್ ಪಿಯು ಕಾಲೇಜಿನಲ್ಲಿ ವಿದ್ಯಾಜ್ಯೋತಿ ಸಮಾರಂಭ: ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ
ಪ್ರತಿ ಶನಿವಾರ ಹೋಬಳಿ ಮಟ್ಟದಲ್ಲಿ ‘ಪ್ರಜಾ ಸೇವಾ ಆಂದೋಲನ’: ಫಲಾನುಭವಿಗಳ ಮನೆ ಬಾಗಿಲಿಗೆ ಸರ್ಕಾರಿ ಸೇವೆ – ತಹಶೀಲ್ದಾರ್ ಶ್ರೇಯಸ್