November 22, 2026

ಉಪ್ಪಲೆಯಲ್ಲಿ ಮಕ್ಕಿ ಮಹಾಬಲೇಶ್ವರ ಹೆಗಡೆ ಹಾಗೂ ಗಣಪತಿ ಹೆಗಡೆ ಸಂಸ್ಮರಣೆ: ಅರ್ಥಪೂರ್ಣ ಸಭಾ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ

ಬಡಾಬಡಗುತಿಟ್ಟಿನ ಕಲಾ ಸಿರಿಯನ್ನು ಮರುಪ್ರಚಲಿತಗೊಳಿಸುವ ಗಂಭೀರ ಸಾಂಸ್ಕೃತಿಕ ಅಭಿಯಾನ ಅಗತ್ಯ: ಡಾ. ಜಿ.ಎಲ್. ಹೆಗಡೆ

ಹೊನ್ನಾವರ (ಉಪ್ಪಲೆ): ಉತ್ತರ ಕನ್ನಡ ಪ್ರದೇಶದ ಬಡಾಬಡಗುತಿಟ್ಟಿನ ಅಗ್ರಮಾನ್ಯ ಮದ್ದಳೆಗಾರರಾಗಿದ್ದ ದಿವಂಗತ ಮಕ್ಕಿ ಮಹಾಬಲೇಶ್ವರ ಹೆಗಡೆ ಹಾಗೂ ಅವರ ಕಿರಿಯ ಸಹೋದರ ದಿ. ಗಣಪತಿ ಹೆಗಡೆ ಅವರ ಸಂಸ್ಮರಣೆ, ವಯೋವೃದ್ಧ ಕಲಾವಿದರ ಸನ್ಮಾನ ಹಾಗೂ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನವು ಉಪ್ಪಲೆಯ ಶ್ರೀ ಮಹಾಲಿಂಗೇಶ್ವರ ಸನ್ನಿಧಾನದಲ್ಲಿ ಇತ್ತೀಚೆಗೆ ಶ್ರದ್ಧಾ-ಭಕ್ತಿಯಿಂದ ಜರುಗಿತು.

ಸಭಾಹಿತ ಮಟ್ಟು ಹಾಗೂ ಬಡಾಬಡಗುತಿಟ್ಟಿನ ಹಿರಿಯ ಭಾಗವತರಾದ ಗೋಪಾಲಕೃಷ್ಣ ಭಟ್ ಜೋಗೀಮನೆ (ಭಾಗವತಿಕೆ), ಪಿ.ಕೆ. ಹೆಗಡೆ ಹರಿಕೇರಿ (ಮದ್ದಳೆ) ಹಾಗೂ ಮಂಜುನಾಥ ಭಂಡಾರಿ ಕರ್ಕಿ (ಚಂಡೆ) ಅವರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಶಿರಾಲಿಯ ಪಿಯು ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಹೆಗಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಮಹಾಗುರು ಪರಂಪರೆಯ ಕುಟುಂಬ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಗೋಪಾಲಕೃಷ್ಣ ಹೆಗಡೆ, “ಮಕ್ಕಿ ಮಹಾಬಲೇಶ್ವರ ಹೆಗಡೆಯವರು ಉತ್ತರ ಕನ್ನಡ ತಿಟ್ಟಿನ ಹಿರಿಯ ಮದ್ದಳೆಗಾರ ಹಾಗೂ ಭಾಗವತರಾಗಿ ಅನೇಕ ಶಿಷ್ಯರನ್ನು ತಯಾರಿಸಿದ ಮಹಾಗುರು. ಅವರ ಈ ಕಲಾಕಾಯಕಕ್ಕೆ ಬೆನ್ನೆಲುಬಾಗಿ ನಿಂತವರು ತಮ್ಮ ಗಣಪತಿ ಹೆಗಡೆಯವರು. ಧರ್ಮಶಾಲೆ ಮಹಾಬಲೇಶ್ವರ ಭಟ್ಟರಂತಹ ಮೇರು ಕಲಾವಿದರನ್ನು ನೀಡಿದ ಈ ಕುಟುಂಬದ ಸಾಧಕರನ್ನು ಸ್ಮರಿಸುವುದು ಶ್ಲಾಘನೀಯ” ಎಂದರು.

ಹಿರಿಯ ಸಂಶೋಧಕ ಡಾ. ಜಿ.ಕೆ. ಹೆಗಡೆ ಹರಿಕೇರಿ ಸಂಸ್ಮರಣಾ ನುಡಿಗಳನ್ನಾಡಿ, ಮಕ್ಕಿ ಸಹೋದರರ ಕಲಾತಪಸ್ಸು ಹಾಗೂ ಪ್ರಾಮಾಣಿಕ ಕಲಾ ಸೇವೆಯ ನೆನಪುಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿ, ‘ಯಕ್ಷರಂಗ’ ಮಾಸಪತ್ರಿಕೆ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತ ಮಾತನಾಡಿ, “ಐತಿಹಾಸಿಕ ಕರ್ಕಿ ಹಾಸ್ಯಗಾರ ಮೇಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮಕ್ಕಿ ಮಹಾಬಲೇಶ್ವರ ಹೆಗಡೆಯವರು ಬಡಾಬಡಗು ಪರಂಪರೆಯ ಪ್ರಶ್ನಾತೀತ ಕಲಾವಿದರಾಗಿದ್ದರು” ಎಂದು ಸ್ಮರಿಸಿದರು. ಕರ್ಕಿ ಮೇಳದ ಪ್ರತಿನಿಧಿಯಾಗಿ ಅಮೆರಿಕದಿಂದ ಆನಂದ ಹಾಸ್ಯಗಾರ ಕರ್ಕಿ ಕಳುಹಿಸಿದ್ದ ಶುಭ ಸಂದೇಶವನ್ನು ಡಾ. ಉಷಾ ಹಾಸ್ಯಗಾರ ವಾಚಿಸಿದರು.

ಗುರು ನಮನ ಸಲ್ಲಿಸಿದ ಶಿಷ್ಯ ಶ್ರೀಕಾಂತ ಭಟ್ಟ ಕುಮಟಾ, ತಮ್ಮ ಬಳಿಯಿದ್ದ ೫೦ ವರ್ಷಗಳಷ್ಟು ಹಳೆಯ ಮಕ್ಕಿ ಮಹಾಬಲೇಶ್ವರ ಹೆಗಡೆಯವರ ಮದ್ದಳೆವಾದನ ಹಾಗೂ ಕಡತೋಕಾ ಮಂಜುನಾಥ ಭಾಗವತರ ಗಾಯನದ ಧ್ವನಿಸುರುಳಿಯನ್ನು ಪ್ರಸಾರ ಮಾಡಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.

ಬಡಾಬಡಗು ಶೈಲಿಯ ಅರಿವು ಮೂಡಲಿ: ಅಧ್ಯಕ್ಷತೆ ವಹಿಸಿದ್ದ ಡಾ. ಜಿ.ಎಲ್. ಹೆಗಡೆ ಮಾತನಾಡಿ, “ಮಕ್ಕಿ ಮಹಾಬಲೇಶ್ವರ ಹೆಗಡೆಯವರ ನಿವಾಸವು ಬಡಾಬಡಗುತಿಟ್ಟಿನ ಒಂದು ವಿಶ್ವವಿದ್ಯಾಲಯದಂತಿತ್ತು. ಅಣ್ಣನಿಗೆ ಸಮದಂಡಿಯಾಗಿ ಗಣಪತಿ ಹೆಗಡೆಯವರೂ ಮದ್ದಳೆಗಾರರಾಗಿ, ಭಾಗವತರಾಗಿ ಅಪಾರ ಶಿಷ್ಯರನ್ನು ಬೆಳೆಸಿದ್ದಾರೆ. ನಮ್ಮ ಪ್ರದೇಶದ ತಿಟ್ಟಿನ ಸ್ವರೂಪದ ಕುರಿತು ಜನರಲ್ಲಿ ಮರು-ಅರಿವು ಮೂಡಿಸುವ ಹಾಗೂ ಬಡಾಬಡಗು ಶೈಲಿಯನ್ನು ಮತ್ತೆ ಪ್ರಚಲಿತಕ್ಕೆ ತರುವ ಗಂಭೀರ ಅಭಿಯಾನ ಆರಂಭವಾಗಬೇಕು” ಎಂದು ಆಶಿಸಿದರು.

ವೇದಮೂರ್ತಿ ಸತ್ಯನಾರಾಯಣ ಭಟ್ಟ ಕೂಜಳ್ಳಿಗೆ ಸನ್ಮಾನ: ದಿ. ಮಕ್ಕಿ ಮಹಾಬಲೇಶ್ವರ ಹೆಗಡೆಯವರ ಶಿಷ್ಯರಾದ ಹಿರಿಯ ಮದ್ದಳೆಗಾರ ಹಾಗೂ ಭಾಗವತ ವೇದಮೂರ್ತಿ ಸತ್ಯನಾರಾಯಣ ಭಟ್ಟ ಕೂಜಳ್ಳಿ ಅವರನ್ನು ಫಲ-ತಾಂಬೂಲ ಹಾಗೂ ಸನ್ಮಾನಪತ್ರ ನೀಡಿ ಗೌರವಿಸಲಾಯಿತು. ಶಿಕ್ಷಕಿ ಪಾರ್ವತಿ ಭಟ್ಟ ಸನ್ಮಾನಪತ್ರ ವಾಚಿಸಿದರು.

ಎಂ.ಎಚ್. ಗಣೇಶ ಸ್ವಾಗತಿಸಿದರು. ಎಂ.ಡಿ. ಮಹಾಬಲೇಶ್ವರ ವಂದಿಸಿ, ನಾಗರಾಜ ಹೆಗಡೆ ಖಾಸಖಂಡ ಕಾರ್ಯಕ್ರಮ ನಿರೂಪಿಸಿದರು.

ಕಳೆಕಟ್ಟಿದ ‘ಗದಾಯುದ್ಧ’ ಯಕ್ಷಗಾನ: ಸಭಾ ಕಾರ್ಯಕ್ರಮದ ನಂತರ ನಡೆದ ‘ಗದಾಯುದ್ಧ’ ಯಕ್ಷಗಾನ ಪ್ರಸಂಗ ಸಭಿಕರ ಕಣ್ಮನ ಸೆಳೆಯಿತು.

ಹಿಮ್ಮೇಳ: ಗೋಪಾಲಕೃಷ್ಣ ಭಟ್ಟ ಜೋಗೀಮನೆ, ಗಜಾನನ ಹೆಗಡೆ ತುಳಗೇರಿಮಠ (ಭಾಗವತಿಕೆ), ಕುಮಾರ್ ಮಯೂರ ಹೆಗಡೆ (ಮದ್ದಳೆ), ಮಂಜುನಾಥ ಭಂಡಾರಿ ಕರ್ಕಿ (ಚಂಡೆ).

ಮುಮ್ಮೇಳ: ಕೆ.ಜಿ. ಮಂಜುನಾಥ ಪುರಪ್ಪೆಮನೆ, ಈಶ್ವರ ಭಟ್ಟ ಅಂಸಳ್ಳಿ, ಕೊಂಡದಕುಳಿ ಲಕ್ಷ್ಮೀಕಾಂತ ಹೆಗಡೆ, ಕಾರ್ತಿಕ ಕಣ್ಣಿ, ಈಶ್ವರ ಭಟ್ಟ ಕಟ್ಟೆ, ಪ್ರಭಾಕರ ಹೆಗಡೆ ಚಿಟ್ಟಾಣಿ ಮುಂತಾದ ದಿಗ್ಗಜ ಕಲಾವಿದರು ಮನೋಜ್ಞ ಅಭಿನಯ ನೀಡಿದರು. ಸಿಂಚನಾ ವಾಹಿನಿಯಲ್ಲಿ ಕಾರ್ಯಕ್ರಮ ನೇರ ಪ್ರಸಾರಗೊಂಡಿತು.

About The Author

error: Content is protected !!