November 23, 2026

ದೋಹಾದಲ್ಲಿ ಕನ್ನಡದ ಡಿಂಡಿಮ ಬಾರಿಸುತ್ತಿರುವ ಮಣ್ಣಿನ ಮಗ: ಸುಬ್ರಹ್ಮಣ್ಯ ಹೆಬ್ಬಾಗಿಲು

ಅನಿವಾಸಿ ಕನ್ನಡಿಗರ ಆಶಾಕಿರಣ, ಸಮಾಜ ಸೇವೆಯ ಹರಿಕಾರ

ಕರ್ನಾಟಕದ ಸಣ್ಣ ಹಳ್ಳಿಯಿಂದ ಕನಸುಗಳ ಮೂಟೆಯನ್ನು ಹೊತ್ತು ಉದ್ಯೋಗಕ್ಕಾಗಿ ಕತಾರಿಗೆ ತೆರಳಿದ ಒಬ್ಬ ಸಾಮಾನ್ಯ ಯುವಕ, ಇಂದು ಇಡೀ ಕತಾರ್‌ನಲ್ಲಿರುವ ಭಾರತೀಯ ಸಮುದಾಯವೇ ಹೆಮ್ಮೆಯಿಂದ ಗುರುತಿಸುವ ಮೇರು ವ್ಯಕ್ತಿಯಾಗಿ ಬೆಳೆದು ನಿಂತಿರುವುದು ಒಂದು ಪ್ರೇರಣಾದಾಯಿ ಪಯಣ. ಕೇವಲ ತಮ್ಮ ಕುಟುಂಬದ ಆರ್ಥಿಕ ಬೆಂಬಲಕ್ಕೆ ಸೀಮಿತವಾಗದೆ, ಸಮಾಜ ಸೇವೆ ಹಾಗೂ ಕನ್ನಡ ನಾಡು-ನುಡಿಯ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವವರೇ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು (ಸುಬ್ಬು).

ಸಮಾಜ ಸೇವೆಯ ಪಯಣ:

ಸುಮಾರು ಒಂದೂವರೆ ದಶಕದ ಹಿಂದೆ ಕರ್ನಾಟಕ ಸಂಘ ಕತಾರ್‌ನ ಸಾಮಾನ್ಯ ಸದಸ್ಯರಾಗಿ ಸಮಾಜ ಸೇವೆಗೆ ಧುಮುಕಿದ ಇವರು, ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ, ತದನಂತರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರಾಗಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಕೊರೋನಾ ಸಂಕಷ್ಟ ಮತ್ತು ‘ವಂದೇ ಭಾರತ’ ಕಾರ್ಯಾಚರಣೆ:

‘ಭಾರತೀಯ ಸಮುದಾಯ ಹಿತೈಷಿ ವೇದಿಕೆ’ (ICBF) ಯ ಜಂಟಿ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ವಿಶ್ವದಾದ್ಯಂತ ಕರೋನಾ ಮಹಾಮಾರಿ ಆವರಿಸಿದ್ದಾಗ, ತಮ್ಮ ಜೀವದ ಹದನೋಡದೆ ಸ್ವಂತ ವಾಹನದಲ್ಲಿ ದಿನನಿತ್ಯ ೧೦೦ ರಿಂದ ೧೫೦ ಕ್ಕೂ ಹೆಚ್ಚು ಬಡ ಕಾರ್ಮಿಕರು ಹಾಗೂ ಜನರಿಗೆ ಅನ್ನ, ತರಕಾರಿ ಮತ್ತು ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಕಾಯಕ ನಡೆಸಿದರು. ಲಾಕ್‌ಡೌನ್ ಸಡಿಲಗೊಂಡ ನಂತರ ‘ವಂದೇ ಭಾರತ’ ಯೋಜನೆಯಡಿ ದೋಹಾದಿಂದ ಬೆಂಗಳೂರಿಗೆ ವಿಶೇಷ ವಿಮಾನಗಳ ಸೇವೆಯನ್ನು ಕಲ್ಪಿಸಿ, ನೂರಾರು ಕನ್ನಡಿಗರನ್ನು ಸುರಕ್ಷಿತವಾಗಿ ಮಾತೃಭೂಮಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಾಂಸ್ಕೃತಿಕ ಹಾಗೂ ರಾಯಭಾರ ಕ್ಷೇತ್ರಗಳಲ್ಲಿ ಕೊಡುಗೆ:

ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಉಪಾಧ್ಯಕ್ಷರಾಗಿ ಎರಡು ಬಾರಿ (೪ ವರ್ಷಗಳು) ಸೇವೆ ಸಲ್ಲಿಸಿದ ಇವರು, ‘ಭಾರತ ಉತ್ಸವ’, ‘ಪ್ಯಾಸೇಜ್ ಟು ಇಂಡಿಯಾ’, ರಕ್ತದಾನ ಶಿಬಿರಗಳು ಹಾಗೂ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕತಾರಿನ ಮೀನುಗಾರರು ಮತ್ತು ಅನಿವಾಸಿ ಕನ್ನಡಿಗರಿಗೆ ಸೂಕ್ತ ನೆರವು ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ.

ದೋಹಾದಲ್ಲಿರುವ ಭಾರತೀಯ ದೂತಾವಾಸದ (Indian Embassy) ರಾಯಭಾರಿಗಳಾಗಿದ್ದ ಪಿ. ಕುಮರನ್, ದೀಪಕ್ ಮಿತ್ತಲ್ ಹಾಗೂ ವಿಪುಲ್ ಅವರಂತಹ ಹಿರಿಯ ಅಧಿಕಾರಿಗಳೊಂದಿಗೆ ನಿಕಟ ಹಾಗೂ ಸ್ನೇಹಿತರಂತಹ ಸಂಬಂಧ ಹೊಂದಿದ್ದು, ಸಮುದಾಯದ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವ ಸೇತುವೆಯಾಗಿದ್ದಾರೆ.

ಕನ್ನಡ ಚಿತ್ರರಂಗ ಹಾಗೂ ಸಾಂಸ್ಕೃತಿಕ ನಂಟು:

ಕತಾರಿನಲ್ಲಿ ಪ್ರಥಮ ಬಾರಿಗೆ ಕನ್ನಡ ಚಿತ್ರಗಳನ್ನು ಚಿತ್ರಮಂದಿರ ತರಿಸಿ ಪ್ರದರ್ಶಿಸುವ ಪರಂಪರೆಗೆ ನಾಂದಿ ಹಾಡಿದವರು ಸುಬ್ರಹ್ಮಣ್ಯ ಹೆಬ್ಬಾಗಿಲು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ದಿವಂಗತ ಪುನೀತ್ ರಾಜಕುಮಾರ್, ಉಪೇಂದ್ರ, ನಾಗತಿಹಳ್ಳಿ ಚಂದ್ರಶೇಖರ್, ಡಾ. ಚಂದ್ರಶೇಖರ ಕಂಬಾರ, ಟಿ.ಎಸ್. ನಾಗಾಭರಣ, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಸೇರಿದಂತೆ ನಾಡಿನ ಸಾಂಸ್ಕೃತಿಕ ಹಾಗೂ ಚಿತ್ರರಂಗದ ಗಣ್ಯರನ್ನು ಕತಾರಿಗೆ ಆಹ್ವಾನಿಸಿ, ವೈಭವದ ಆತಿಥ್ಯ ನೀಡಿ ಗೌರವಿಸುವ ಕಾಯಕವನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿದ್ದಾರೆ. ಸ್ವತಃ ಶಿವರಾಜ್ ಕುಮಾರ್ ಅವರು ಸುಬ್ರಹ್ಮಣ್ಯ ಅವರ ದೋಹಾದ ನಿವಾಸದಲ್ಲೇ ಇದ್ದು ಜನ್ಮದಿನ ಆಚರಿಸಿಕೊಂಡಿರುವುದು ಇವರ ಸಾಂಸ್ಕೃತಿಕ ಬಾಂಧವ್ಯಕ್ಕೆ ಸಾಕ್ಷಿ.

ಅಹೋರಾತ್ರಿ ಮಾನವೀಯ ಸೇವೆ:

ಪಾಸ್‌ಪೋರ್ಟ್, ವೀಸಾ ಮಾರ್ಗದರ್ಶನ, ಭಾರತೀಯ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶಾವಕಾಶ, ಕೆಲಸ ಹುಡುಕಿಕೊಡುವುದು ಮಾತ್ರವಲ್ಲದೆ, ಇತ್ತೀಚೆಗೆ ಸೆಪ್ಟೆಂಬರ್ ೧೦ರಂದು ದುರಾದೃಷ್ಟವಶಾತ್ ಹೃದಯಾಘಾತದಿಂದ ಮೃತಪಟ್ಟ ಯುವತಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ನೆರವಾಗಿದ್ದು ಸೇರಿದಂತೆ, ನೂರಾರು ಅನಾಥ ಪಾರ್ಥಿವ ಶರೀರಗಳನ್ನು ತಾಯ್ನಾಡಿಗೆ ಕಳುಹಿಸುವ ‘ವೈಕುಂಠ ಸೇವೆ’ಯನ್ನು ಯಾವುದೇ ಪ್ರಚಾರವಿಲ್ಲದೆ ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ.

“ಸಮಾಜ ಸೇವೆ ಎನ್ನುವುದು ಮಾನವೀಯತೆಯ ಆರಾಧನೆ, ಅದನ್ನು ಪೈಪೋಟಿಗೆ ಮಾಡಬಾರದು” ಎಂಬ ತತ್ತ್ವವನ್ನು ನೆಚ್ಚಿಕೊಂಡಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕತಾರಿನ ಅನಿವಾಸಿ ಕನ್ನಡಿಗರ ಪಾಲಿಗೆ ನಿಜಕ್ಕೂ ಮನೆ ಮಗ ಹಾಗೂ ಭರವಸೆಯ ಬೆಳಕಾಗಿದ್ದಾರೆ.

About The Author

error: Content is protected !!