ಗೋಕರ್ಣ: ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಗೋಕರ್ಣದಲ್ಲಿ ಇನ್ನು ಮುಂದೆ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು, ‘ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ’ ಎಂಬ ನೂತನ ನಿಯಮ ಜಾರಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸರು ಘೋಷಿಸಿದ ಈ ಮಹತ್ವದ ನಿಯಮಕ್ಕೆ ಇಂಧನ ಕಂಪನಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರು ಸಂಪೂರ್ಣ ಸಹಕಾರ ನೀಡಿದ್ದಾರೆ.
ಸಿ.ಪಿ.ಐ. ಶ್ರೀಧರ ಎಸ್.ಆರ್. ಅವರ ನೇತೃತ್ವದಲ್ಲಿ ಚೌಡಗೇರಿ ಪೆಟ್ರೋಲ್ ಬಂಕ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಹೆಲ್ಮೆಟ್ ಧರಿಸದೇ ಬಂಕ್‌ಗೆ ಆಗಮಿಸಿದ ವಾಹನ ಸವಾರರಿಗೆ ಪೆಟ್ರೋಲ್ ನೀಡಲು ನಿರಾಕರಿಸಲಾಯಿತು. ನಂತರ ಪೊಲೀಸರು ಅವರಿಗೆ ಸಂಚಾರ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿ, ಹೆಲ್ಮೆಟ್ ಧರಿಸಿದ ಬಳಿಕವೇ ಇಂಧನ ಹಾಕಿಸಿಕೊಳ್ಳಲು ಅನುಮತಿ ನೀಡಿದರು.
ಯಮ-ಚಿತ್ರಗುಪ್ತರ ಮೂಲಕ ಜಾಗೃತಿ: ಈ ಸಂದರ್ಭದಲ್ಲಿ ನಿಯಮ ಜಾರಿಯ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ವಿನೂತನ ಮಾರ್ಗವನ್ನು ಅನುಸರಿಸಿತು. ಅಪಘಾತ ಸಂಭವಿಸಿದರೆ ಕಾದಿರುವ ಅಪಾಯವನ್ನು ಸೂಚಿಸುವಂತೆ ಪೊಲೀಸ್ ಸಿಬ್ಬಂದಿ ಪೌರಾಣಿಕ ಪಾತ್ರಗಳ ವೇಷ ಧರಿಸಿ ಗಮನ ಸೆಳೆದರು. ಹವಲ್ದಾರ್ ಅನುರಾಜ ನಾಯ್ಕ ಅವರು ಚಿತ್ರಗುಪ್ತನಾಗಿ, ಸಿಬ್ಬಂದಿ ವಸಂತ ಕಲ್ಪಾಡಿ ಅವರು ಯಮಧರ್ಮನಾಗಿ ಹಾಗೂ ಪೊಲೀಸ್ ಸಿಬ್ಬಂದಿ ಪರಮೇಶ್ವರ ಮತ್ತು ಸ್ಥಳೀಯರಾದ ಸುರೇಶ ಆಗೇರ ಅವರು ಯಮನ ಕಿಂಕರರಾಗಿ ಪಾತ್ರ ನಿರ್ವಹಿಸುವ ಮೂಲಕ ಹೆಲ್ಮೆಟ್ ಧರಿಸದ ಸವಾರರಿಗೆ ಎಚ್ಚರಿಕೆ ನೀಡಿದರು. ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಖಾದರ್ ಬಾಷಾ ಹಾಗೂ ಇತರ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
About The Author


More Stories
ಹಿರೇಗುತ್ತಿಯಲ್ಲಿ 14 ವಯೋಮಾನದ ಬಾಲಕ-ಬಾಲಕಿಯರ ಇಲಾಖಾ ಕ್ರೀಡಾಕೂಟ
ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’
ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ