ಭಟ್ಕಳ: ಐ.ಡಿ. ಖಾನ್ ಎಂದೇ ಪ್ರಸಿದ್ಧರಾಗಿದ್ದ ನಿವೃತ್ತ ಶಿಕ್ಷಕ ಇಬ್ರಾಹಿಂ ದಾವೂದ್ ಖಾನ್ (85) ಅವರು ಶುಕ್ರವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೊನೆಯವರೆಗೂ ಸಕ್ರಿಯರಾಗಿದ್ದ ಅವರು, ವಿಶೇಷವಾಗಿ ಉರ್ದು ಶಾಲೆಗಳ ಉಳಿವು ಮತ್ತು ಬಲವರ್ಧನೆಗಾಗಿ ನಿರಂತರವಾಗಿ ಶ್ರಮಿಸಿದ್ದರು. ಡೆಕ್ಕನ್ ವೆಲ್ಫೇರ್ ಅಸೋಸಿಯೇಶನ್ ಇದರ ಅಧ್ಯಕ್ಷರಾಗಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಸಕ್ರೀಯ ಕಾರ್ಯಕರ್ತರಾಗಿಯೂ ಇವರು ಸಾಮಾಜಿ, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. 20ನೇ ವಯಸ್ಸಿನಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದ ಖಾನ್ ಅವರು ಹಳಿಯಾಳ, ದಾಂಡೇಲಿ, ಕಾರವಾರ, ಕುಮಟಾ ಮತ್ತು ಭಟ್ಕಳದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸುಮಾರು 40 ವರ್ಷಗಳ ಸುದೀರ್ಘ ಸೇವೆಯ ನಂತರ 2000ರಲ್ಲಿ ನಿವೃತ್ತರಾಗಿದ್ದರು.
ಕಳೆದ ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ 2.30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರ ಪುತ್ರರಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ಖ್ಯಾತ ವೈದ್ಯ ಡಾ. ನಸೀಮ್ ಖಾನ್ ಸೇರಿದ್ದಾರೆ. ದಿವಂಗತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.
ನವಾಯತ್ ಕಾಲೋನಿಯ ಮಿಲ್ಲಿಯಾ ಜಾಮಿಯಾ ಮಸೀದಿಯಲ್ಲಿ ಜನಾಝಾ ನಮಾಝ್ ನೆರವೇರಿಸಿ ಮೃತರ ಅಂತ್ಯಸಂಸ್ಕಾರ ನಡೆಸಲಾಯಿತು. ಅಂತಿಮ ಯಾತ್ರೆಯಲ್ಲಿ ನೂರಾರು ಮಂದಿ ಭಾಗವಹಿಸಿ ಗೌರವ ಸಲ್ಲಿಸಿದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ