ಭಟ್ಕಳ ಶಹರ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಭಟ್ಕಳ: ಕಳೆದ ಸುಮಾರು ಮೂರುವರೆ ತಿಂಗಳಿನಿಂದ ಕಾಣೆಯಾಗಿದ್ದ ಕುಮಟಾ ತಾಲ್ಲೂಕಿನ ಮದ್ಗುಣಿ–ಹಳ್ಳಾರ ಗ್ರಾಮದ ನಿವಾಸಿ ಜಾಕೀರ ಬೇಗ ತಂದೆ ಬುಡಾನ ಬೇಗ (33) ಅವರನ್ನು ಭಟ್ಕಳ ಶಹರ ಪೊಲೀಸರು ತುಮಕೂರಿನಲ್ಲಿ ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಮದುವೆಗೆ ಸಂಬಂಧಿಸಿದಂತೆ ಚಿನ್ನ ಖರೀದಿಸಲು ಕುಮಟಾದಿಂದ ಭಟ್ಕಳಕ್ಕೆ ಬಂದಿದ್ದ ಜಾಕೀರ ಬೇಗ, ನೂರಪಳ್ಳಿ ಮಸೀದಿಗೆ ನಮಾಜ್ ಮಾಡಲು ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದರು. ಆದರೆ ನಂತರ ಯಾವುದೇ ಮಾಹಿತಿ ನೀಡದೇ ಕಾಣೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಭಟ್ಕಳ ಶಹರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಜಾಕೀರ ಬೇಗ ತಮ್ಮ ಬಳಿಯಿದ್ದ ಮೊಬೈಲ್ ಫೋನ್ ಅನ್ನು ಮಾರಾಟ ಮಾಡಿ, ತುಮಕೂರಿನೊಂದೇ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿರುವುದು ತಿಳಿದುಬಂದಿದೆ.
ಭಟ್ಕಳ ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ ಪಿಎಸ್‌ಐ ನವೀನ್ ಎಸ್. ನಾಯ್ಕ ಹಾಗೂ ಸಿಬ್ಬಂದಿಗಳಾದ ರವಿ ಪಟಗಾರ, ದೇವು ಆರ್. ನಾಯ್ಕ, ಕಾಶಿನಾಥ ಕೊಟಗುಣಶಿ ಅವರನ್ನು ಒಳಗೊಂಡ ತಂಡವನ್ನು ಬೆಂಗಳೂರು–ತುಮಕೂರು ಭಾಗಕ್ಕೆ ಕಳುಹಿಸಲಾಗಿತ್ತು. ತಾಂತ್ರಿಕ ಕರೆಗಳ ಮಾಹಿತಿಯ ಆಧಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ತುಮಕೂರಿನಲ್ಲಿ ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದೆ.
ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ. ಕೃಷ್ಣಮೂರ್ತಿ ಹಾಗೂ ಜಗದೀಶ ಎಂ., ಡಿವೈಎಸ್ಪಿ ಮಹೇಶ್ ಎಂ. ಅವರ ನಿರ್ದೇಶನದಂತೆ ನಡೆಯಿತು. ಕಾರವಾರ ಟೆಕ್ನಿಕಲ್ ಸೆಲ್‌ನ ಸಿಬ್ಬಂದಿಗಳಾದ ಉದಯ ಗುನಗಾ ಮತ್ತು ಬಬನ್ ಕದಂ ಅವರ ಸಹಕಾರವೂ ಕಾರ್ಯಾಚರಣೆಗೆ ಲಭಿಸಿದೆ.
ಭಟ್ಕಳ ಶಹರ ಪೊಲೀಸರ ಸಮಯೋಚಿತ ಕ್ರಮದಿಂದಾಗಿ ಕಾಣೆಯಾದ ವ್ಯಕ್ತಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ