April 17, 2026

ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು

ಭಟ್ಕಳ: ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಎಂಬ ಮಾಯೆಗೆ ಒಳಗಾಗಿ ಸಮಯವನ್ನು ವ್ಯರ್ಥ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳ ಕೈಯಿಂದ ಮೊಬೈಲ್ ದೂರವಿಟ್ಟು, ಅವರನ್ನು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳತ್ತ ಕೊಂಡೊಯ್ಯುವುದು ಕಾಲದ ಅಗತ್ಯ ಎಂದು ಭಟ್ಕಳದ ಶ್ರೀ ನಾಗಯಕ್ಷೆ ಮಹಾಸತಿ ಧರ್ಮಾದೇವಿ ಸಂಸ್ಥಾನದ ಧರ್ಮದರ್ಶಿ ಶ್ರೀ ರಾಮದಾಸ ಪ್ರಭು ಅಭಿಪ್ರಾಯಪಟ್ಟರು.

ಅವರು ಶ್ರೀ ನಾಗಯಕ್ಷೀ ದೇವಾಲಯದ ವರ್ಧಂತ್ಯೋತ್ಸವದ ಅಂಗವಾಗಿ, ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ‘ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರ’ದ ವಿದ್ಯಾರ್ಥಿಗಳಿಂದ ಶ್ರೀ ನಾಗಯಕ್ಷೀ ಸಭಾಭವನದಲ್ಲಿ ಪ್ರದರ್ಶಿಸಿದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನವನ್ನು ವೀಕ್ಷಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಮಾಜವು ದಿನದಿಂದ ದಿನಕ್ಕೆ ವೇಗವಾಗಿ ಪರಿವರ್ತನೆಯಾಗುತ್ತಿರುವ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಮುಳುಗುತ್ತಿರುವುದು ಅವರ ವ್ಯಕ್ತಿತ್ವ ಹಾಗೂ ಸೃಜನಾತ್ಮಕತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲೆ, ಸಂಸ್ಕೃತಿ, ಕ್ರೀಡೆಗಳತ್ತ ಪ್ರೇರೇಪಿಸುವುದು ಅತ್ಯವಶ್ಯಕ. ಈ ದಿಸೆಯಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕೈಗೊಂಡಿರುವ ಪ್ರಯತ್ನ ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಉತ್ತಮ ವೇದಿಕೆ ಕಲ್ಪಿಸುತ್ತಿರುವುದೂ ಉತ್ತಮ ಬೆಳವಣಿಗೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಮುರಳೀಧರ ಪ್ರಭು, ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ನೀಡಿದ ಶ್ರೀ ನಾಗಯಕ್ಷೀ ಮಹಾಸತಿ ಧರ್ಮಾದೇವಿ ಸಂಸ್ಥಾನದ ಧರ್ಮದರ್ಶಿಗಳು ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಯಕ್ಷಗಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸಿದರು.

ಜನಮನ ಗೆದ್ದ “ದೇವಿ ಮಹಾತ್ಮೆ” ಯಕ್ಷಗಾನ

‘ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರ’ದ ವಿದ್ಯಾರ್ಥಿಗಳಿಂದ ನಡೆದ “ದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನಗೆದ್ದಿತು. ಬಾಲಕ-ಬಾಲಕಿಯರ ಮನಮುಟ್ಟುವ ಅಭಿನಯ, ಸಂಭಾಷಣೆ ಹಾಗೂ ನೃತ್ಯ ಸಂಯೋಜನೆ ಪ್ರೇಕ್ಷಕರಿಂದ ಭಾರಿ ಪ್ರಶಂಸೆಗೆ ಪಾತ್ರವಾಯಿತು.

ಭಾಗವತರಾಗಿ ಗಜಾನನ ಹೆಗಡೆ (ಧರ್ಮಶಾಲೆ), ಚಂಡೆಯಲ್ಲಿ ಮಂಜುನಾಥ ಭಂಡಾರಿ (ಕರ್ಕಿ), ಮೃದಂಗದಲ್ಲಿ ಮಯೂರ ಹೆಗಡೆ (ಹರಿಕೇರಿ) ಅವರು ಸಮರ್ಥವಾಗಿ ಸಹಕರಿಸಿದರು. ಮುಮ್ಮೇಳದಲ್ಲಿ ದೇವೇಂದ್ರನಾಗಿ ಧನುಷ್ ಎಸ್. ನಾಯ್ಕ, ದಿಕ್ಪಾಲಕರಾಗಿ ಕುಶ್ ಎಸ್. ದಿವಾಕರ, ಸಾನ್ವಿ ಹೆಗಡೆ, ಮಾಲಿನಿಯಾಗಿ ಸಮನ್ವಿ ಎ. ನಾಯಕ, ಸುಪಾರ್ಶ್ವಮುನಿಯಾಗಿ ದೇವಿಪ್ರಸಾದ ಮಡಿವಾಳ, ವಿದ್ಯುನ್ಮಾಲಿಯಾಗಿ ಅನನ್ಯಾ ಭಟ್ಟ ಅವರು ಗಮನಸೆಳೆದರು.

ಇನ್ನು ಬ್ರಹ್ಮನಾಗಿ ಸೌಮ್ಯ ಹೆಗಡೆ, ವಿಷ್ಣುವಾಗಿ ಕೃತಿಕಾ ನಾಯ್ಕ, ಈಶ್ವರನಾಗಿ ಹರ್ಷಿಕಾ ಮಡಿವಾಳ, ಮಹಿಷನಾಗಿ ಶ್ರೀನಿಧಿ ನಾಯ್ಕ, ದೇವಿಯಾಗಿ ರಕ್ಷಾ ಎಸ್. ದಿವಾಕರ ಹಾಗೂ ಹಾಸ್ಯ ಪಾತ್ರದಲ್ಲಿ ಪನ್ನಗ ವಿ. ಶಾನಭಾಗ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿ ಭಾರೀ ಚಪ್ಪಾಳೆಗಳಿಸಿದರು.

ಒಟ್ಟಾರೆ, ಈ ಯಕ್ಷಗಾನ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹೊಮ್ಮಿಸುವುದರ ಜೊತೆಗೆ, ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿ ಗುರುತಿಸಲ್ಪಟ್ಟಿತು.

About The Author

error: Content is protected !!