April 18, 2026

ಭಟ್ಕಳದಲ್ಲಿ ಎ.19ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಭಟ್ಕಳ: ಇಲ್ಲಿನ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 19ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಯೂಸುಫ್ ಕೋಲಾ ತಿಳಿಸಿದರು.

ಬುಧವಾರ ಕಾಲೇಜಿನ ಪ್ರಾಂಶುಪಾಲರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣದ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ನೇತ್ರ (ಕಣ್ಣಿನ) ಪರೀಕ್ಷೆ, ಸ್ತ್ರೀರೋಗ, ಮಕ್ಕಳ ಆರೋಗ್ಯ, ಕ್ಯಾನ್ಸರ್ (ಆಂಕಾಲಜಿ) ಸೇರಿದಂತೆ ಒಂಬತ್ತು ವಿಭಾಗಗಳ ತಜ್ಞ ವೈದ್ಯರು ಸೇವೆ ನೀಡಲಿದ್ದಾರೆ ಎಂದು ಹೇಳಿದರು.

ಫಾದರ್ ಮುಲ್ಲರ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಕೆಲ್ವಿನ್ ಮಾತನಾಡಿ, ಶಿಬಿರಕ್ಕೆ ಆಗಮಿಸುವ ಎಲ್ಲರಿಗೆ ರೂ.200 ಮೌಲ್ಯದ ಹೆಲ್ತ್ ಕಾರ್ಡ್ ಉಚಿತವಾಗಿ ನೀಡಲಾಗುವುದು. ಜೊತೆಗೆ ರೂ.150 ನೋಂದಣಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು. ಈ ಕಾರ್ಡ್ ಹೊಂದಿರುವವರಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆ ಉಚಿತವಾಗಿದ್ದು, ಸೂಪರ್ ಸ್ಪೆಷಾಲಿಟಿ ಓಪಿಡಿ ಸಲಹೆಗಳಿಗೆ ಶೇ.50 ರಿಯಾಯಿತಿ ಲಭ್ಯವಾಗಲಿದೆ ಎಂದರು.

ಶಿಬಿರದಲ್ಲಿ ಆಯುಷ್ಮಾನ್ ಭಾರತ್, ಆಭಾ ಕಾರ್ಡ್ (ABHA), ಯಶಸ್ವಿನಿ ಸೇರಿದಂತೆ ವಿವಿಧ ಸರ್ಕಾರಿ ಆರೋಗ್ಯ ವಿಮೆಗಳ ಕುರಿತು ಮಾಹಿತಿ ಹಾಗೂ ನೋಂದಣಿ ಸಹಾಯ ನೀಡಲಾಗುವುದು. ಆಸ್ಪತ್ರೆಯಲ್ಲಿ ಸುಮಾರು 70 ಶೇಕಡಾ ಹಾಸಿಗೆಗಳನ್ನು ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಮೀಸಲಿಟ್ಟಿರುವುದಾಗಿ ಹೇಳಿದರು.

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯ ವಿವಿಧ ವಿಧಾನಗಳು, ಕಿಡ್ನಿ ಮತ್ತು ಲಿವರ್ ಕಸಿ, ಹೈರಿಸ್ಕ್ ಗರ್ಭಧಾರಣೆ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳಿವೆ. ಇತ್ತೀಚೆಗೆ 8 ವಾರಗಳ ಭ್ರೂಣಕ್ಕೆ ರಕ್ತ ವರ್ಗಾವಣೆ ಮಾಡುವ ಅಪರೂಪದ ಸಾಧನೆಯನ್ನು ಸಾಧಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕಾಲೇಜು ಆಡಳಿತ ಮಂಡಳಿ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಂಜುಮನ್ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಶಾಬಂದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author

error: Content is protected !!