ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀನೃಸಿಂಹ ದೇವರ ವಾರ್ಷಿಕ ರಥೋತ್ಸವವು ಭಕ್ತಿ, ಸಂಪ್ರದಾಯ ಮತ್ತು ಭಾವೈಕ್ಯದ ವಾತಾವರಣದಲ್ಲಿ ಅತ್ಯಂತ ವೈಭವದಿಂದ ಗುರುವಾರವ ರಾತ್ರಿ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.

ರಥೋತ್ಸವದ ಅಂಗವಾಗಿ ಕಳೆದ ಮೂರು ದಿನಗಳಿಂದ ಹಾಗೂ ಜಯಂತಿಯ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರಿಗೆ ಮಹಾಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಧ್ವಜಸ್ಥಾಪನೆ, ಅನ್ನಪೂರ್ಣೇಶ್ವರಿ ಪೂಜೆ, ವೇದಘೋಷ, ಮಂಗಳಾರತಿ ಹಾಗೂ ಭಜನಾ ಕಾರ್ಯಕ್ರಮಗಳು ಭಕ್ತಿಭಾವವನ್ನು ಹೆಚ್ಚಿಸಿತು. ಮಠದ ಆವರಣವು ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ರಥೋತ್ಸವ ನಡೆಯಿತು.
ರಾತ್ರಿ ವಿಶೇಷ ಆಕರ್ಷಣೆಯಾಗಿದ್ದ ಶ್ರೀ ದೇವರ ರಥೋತ್ಸವ ಭಕ್ತರ ಜಯಘೋಷಗಳ ನಡುವೆ ನಡೆಯಿತು. ರಥಾರೂಢನಾದ ಶ್ರೀ ಲಕ್ಷ್ಮೀನೃಸಿಂಹ ದೇವರ ದರ್ಶನ ಪಡೆಯಲು ಭಕ್ತರು ಮುಗಿಬಿದ್ದರು. ರಾತ್ರಿ ೧೧ ಗಂಟೆಗೆ ರಥಾ ರೂಢನಾದ ದೇವರ ರಥೋತ್ಸವ ೧೧.೩೦ಕೆ ಆರಂಭವಾಯಿತು. ರಾತ್ರಿ ೧ ಗಂಟೆ ವೇಳೆಗೆ ರಥ ವಾಪಸ್ಸಾಯಿತು.

ರಥೋತ್ಸವದಲ್ಲಿ ಸಂಭ್ರಮದ ಬಾಣಬಿರುಸುಗಳು ಆಕಾಶವನ್ನು ಬೆಳಗಿಸಿದವು. ತಾಳ, ವಾದ್ಯಗಳ ನಿನಾದ, ಭಕ್ತರ ಜಯಘೋಷದ ನಡುವೆ ರಥೋತ್ಸವವು ಮನಸೆಳೆಯಿತು.
ಈ ರಥೋತ್ಸವದ ಮತ್ತೊಂದು ವಿಶೇಷತೆ ಎಂದರೆ ಸರ್ವಧರ್ಮೀಯರ ಸಹಕಾರ. ಹಿಂದು ಸಮುದಾಯದೊಂದಿಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಜನರೂ ಉತ್ಸವದ ವಿವಿಧ ವ್ಯವಸ್ಥೆಗಳಲ್ಲಿ ಕೈಜೋಡಿಸಿದ್ದು, ನಿಜಾರ್ಥದಲ್ಲಿ ಇದು ಭಾವೈಕ್ಯತೆಯ ರಥೋತ್ಸವವಾಗಿ ಮೂಡಿಬಂತು. ಧರ್ಮಗಳ ನಡುವೆ ಸೌಹಾರ್ದ ಮತ್ತು ಪರಸ್ಪರ ಗೌರವವನ್ನು ಸಾರುವ ಅಪೂರ್ವ ಉದಾಹರಣೆಯಾಗಿ ಈ ಉತ್ಸವ ಗಮನ ಸೆಳೆಯಿತು.

ರಥೋತ್ಸವದ ಬಳಿಕ ನಡೆದ ಯಕ್ಷಗಾನ ಕಾರ್ಯಕ್ರಮವೂ ಭಕ್ತರನ್ನು ರಂಜಿಸಿತು. ಯಕ್ಷಶಾಲಾ ಸಂಸ್ಥೆ ನೇತೃತ್ವದಲ್ಲಿ ಖ್ಯಾತ ಕಲಾವಿದರಿಂದ ಪ್ರದರ್ಶಿತವಾದ “ಸುಭದ್ರಾ ಕಲ್ಯಾಣ” ಯಕ್ಷಗಾನ ಪ್ರದರ್ಶನ ಮೆಚ್ಚುಗೆಗೆ ಕಾರಣವಾಯಿತು.

More Stories
ಶಿರಸಿ: ಗ್ರಾಮೀಣ ಯುವ ಉದ್ಯಮಿ ಪ್ರವರ್ ಹೆಗಡೆಗೆ ರಾಜ್ಯ ಮಟ್ಟದ ಮೆಚ್ಚುಗೆ
‘ಸಂಸ್ಕಾರ ಸುಧಾ’ ಗ್ರೀಷ್ಮ ಶಿಬಿರ ಸಮಾರೋಪ
ಸ್ಟೂಡೆಂಟ್ಸ್ ಹೋಂ ವಿದ್ಯಾರ್ಥಿನಿಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ