May 25, 2026

ಮುರಿನಕಟ್ಟೆ ಧ್ವಂಸ ಪ್ರಕರಣ ಉದ್ವಿಗ್ನತೆ: ಠಾಣೆ ಎದುರು ಧರಣಿ, ಭಟ್ಕಳ-ಜಾಲಿಯಲ್ಲಿ 144 ಸೆಕ್ಷನ್ ಜಾರಿ

ಭಟ್ಕಳ-ಜಾಲಿಯಲ್ಲಿ 144 ಸೆಕ್ಷನ್ ಜಾರಿ

ಭಟ್ಕಳ: ತಾಲೂಕಿನ ವೆಂಕಟಾಪುರ ಪ್ರದೇಶದಲ್ಲಿ ಹಿಂದುಗಳ ಧಾರ್ಮಿಕ ನಂಬಿಕೆಗೆ ಸಂಬAಧಿಸಿದ ಮುರಿನಕಟ್ಟೆ ಮರುನಿರ್ಮಾಣ ವಿಚಾರ ಭಾನುವಾರ ಉದ್ವಿಗ್ನತೆಗೆ ಕಾರಣವಾಗಿದ್ದು, ಘಟನೆಯ ಬೆನ್ನಲ್ಲೇ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ನಗರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಪರಿಸ್ಥಿತಿ ಸೂಕ್ಷ್ಮವಾಗಿರುವ ಹಿನ್ನೆಲೆ ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 27ರ ಬೆಳಗ್ಗೆ 6 ಗಂಟೆಯವರೆಗೆ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ತೆರವುಗೊಳಿಸಲಾಗಿದ್ದ ವೆಂಕಟಾಪುರ ಜಾಗಟೆಕಟ್ಟೆಯ ಮುರಿನಕಟ್ಟೆಯನ್ನು ಸಾಕಷ್ಟು ಸಮಯದ ಬಳಿಕ ಅದೇ ಸ್ಥಳದಲ್ಲಿ ಭಾನುವಾರ ಹಿಂದೂ ಸಂಘಟನೆಯ ಕಾರ್ಯಕರ್ತರು ಮರುನಿರ್ಮಾಣ ಮಾಡಿದ್ದರು. ಆದರೆ ಇದೇ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಮುಸ್ಲಿಂ ಸಮುದಾಯದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಟ್ಟೆ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಬಳಿಕ ಬೆಳಗ್ಗೆ ನಿರ್ಮಿಸಿದ್ದ ಮುರಿನಕಟ್ಟೆಯನ್ನು ಕೆಲವರು ಧ್ವಂಸಗೊಳಿಸಿರುವುದರಿAದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಘಟನೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ತಳ್ಳಾಡಿಸಿದ ಘಟನೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಈ ಬೆಳವಣಿಗೆಯ ಬಳಿಕ ಮಾಜಿ ಶಾಸಕ ಸುನೀಲ್ ನಾಯ್ಕ ನೇತೃತ್ವದಲ್ಲಿ ಹಿಂದೂ ಮುಖಂಡರಾದ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ ಸೇರಿದಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ನಗರ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮುರಿನಕಟ್ಟೆ ಧ್ವಂಸಗೊಳಿಸಿದವರ ವಿರುದ್ಧ ಹಾಗೂ ಕರ್ತವ್ಯ ನಿರತ ಪೊಲೀಸರನ್ನು ದೂಡಿದವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಠಾಣೆ ಎದುರು ಧರಣಿ ನಡೆಸಿದರು.
ನಂತರ ಮಧ್ಯರಾತ್ರಿ ಪ್ರತಿಭಟನಾಕಾರರು ಮುರಿನಕಟ್ಟೆ ಪುನರ್‌ನಿರ್ಮಾಣಕ್ಕಾಗಿ ಸ್ಥಳಕ್ಕೆ ತೆರಳಲು ಯತ್ನಿಸಿದ ವೇಳೆ ಪೊಲೀಸರು ಸ್ಥಳದ ಸಮೀಪ ತೆರಳದಂತೆ ತಡೆದರು. ಈ ವೇಳೆ ಕೆಲವು ಹಿಂದೂ ಸಂಘಟನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬAಧಿಸಿ ಸಾರ್ವಜನಿಕ ಶಾಂತಿ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 25ರ ಬೆಳಗ್ಗೆ 6 ಗಂಟೆಯಿAದ ಮೇ 27ರ ಬೆಳಗ್ಗೆ 6 ಗಂಟೆಯವರೆಗೆ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರು ಶಾಂತಿ ಕಾಪಾಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

About The Author

error: Content is protected !!