July 25, 2026

CSR ವಂಚಿಸುವ ಕಂಪನಿಗಳನ್ನು ಕ್ಷೇತ್ರದಿಂದ ಒದ್ದು ಓಡಿಸಲಾಗುವುದು: ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಎಚ್ಚರಿಕೆ

ಕೂಡ್ಲಿಗಿ (ವಿಜಯನಗರ): “ಸಿಎಸ್‌ಆರ್ (CSR – ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಅನುದಾನವು ಯಾವುದೇ ಕಾರಣಕ್ಕೂ ಪೋಲಾಗಬಾರದು. ಅದು ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗಾಗಿ ಸದ್ಬಳಕೆಯಾಗಬೇಕು. ರೈತರಿಗೆ, ಸ್ಥಳೀಯರಿಗೆ ಹಾಗೂ ಸಮಾಜಕ್ಕೆ ವಂಚಿಸುವ ಯಾವುದೇ ಕಂಪನಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಿ, ಕ್ಷೇತ್ರದಿಂದ ಒದ್ದು ಓಡಿಸಲಾಗುವುದು,” ಎಂದು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸಲ್ಲಿಸಿದ ವಿವಿಧ ಅಹವಾಲುಗಳ ಹಕ್ಕೊತ್ತಾಯ ಪತ್ರವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಶಾಸಕರ ಪ್ರಮುಖ ಹೇಳಿಕೆಗಳು:

ಅಭಿವೃದ್ಧಿಗೆ ಸಹಕಾರ ಅಗತ್ಯ: ಸಂಘಟನೆ ಅಥವಾ ಹೋರಾಟದ ಹೆಸರಿನಲ್ಲಿ ಕಂಪನಿಗಳಿಗೆ ಅನಗತ್ಯ ಕಿರುಕುಳ ನೀಡುವುದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿಗೆ ಕಂಪನಿಗಳು ಅಧಿಕೃತವಾಗಿ ಸ್ಥಾಪನೆಯಾಗುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ರೈತರು ಮತ್ತು ಸ್ಥಳೀಯರು ಇದಕ್ಕೆ ಸಹಕರಿಸಬೇಕು.

ಜನಸಾಮಾನ್ಯರ ಧ್ವನಿ: ತಾವು ಯಾವಾಗಲೂ ರೈತರು, ಕಾರ್ಮಿಕರು ಮತ್ತು ಗ್ರಾಮೀಣ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಲಿದ್ದು, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಸಿಎಸ್‌ಆರ್ ಅನುದಾನವನ್ನು ವಿನಿಯೋಗಿಸಲಾಗುವುದು.

    ತಹಶೀಲ್ದಾರ್ ಎದುರಲ್ಲೇ ತಾಲ್ಲೂಕಾಡಳಿತದ ವಿರುದ್ಧ ರೈತರ ಆಕ್ರೋಶದ ಸುರಿಮಳೆ!

    ರೈತ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಶಾಸಕರನ್ನು ಭೇಟಿ ಮಾಡಿ, ವಿವಿಧ ಇಲಾಖೆಗಳಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ವಿಶೇಷವೆಂದರೆ, ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರ ಸಮ್ಮುಖದಲ್ಲೇ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ರೈತರು ತೀವ್ರ ಬೇಸರ ವ್ಯಕ್ತಪಡಿಸಿದರು.

    ರೈತ ಮುಖಂಡರು ಮುನ್ನೆಲೆಗೆ ತಂದ ಪ್ರಮುಖ ಸಮಸ್ಯೆಗಳು:

    ಮಾಹಿತಿ ಕೊರತೆ: ಕೃಷಿ ಇಲಾಖೆ ಹಾಗೂ ತಾಲ್ಲೂಕಾಡಳಿತ ರೈತರಿಗೆ ಸೂಕ್ತ ಸಹಕಾರ ನೀಡುತ್ತಿಲ್ಲ. ಇಲಾಖೆಯ ಸೌಲಭ್ಯಗಳು ಹಾಗೂ ಅನುದಾನದ ಮಾಹಿತಿಯನ್ನು ಅಧಿಕಾರಿಗಳು ಮುಚ್ಚಿಡುತ್ತಿದ್ದಾರೆ.

    ಅರ್ಜಿಗಳ ವಿಳಂಬ: ಫಾರಂ 50, 53 ಹಾಗೂ 57ರ ಅಡಿಯಲ್ಲಿ ಸಾಗುವಳಿ ಚೀಟಿಗಾಗಿ ಸಲ್ಲಿಸಿರುವ ನೂರಾರು ಅರ್ಜಿಗಳು ವರ್ಷಗಳಿಂದ ಧೂಳು ಹಿಡಿಯುತ್ತಿದ್ದು, ರೈತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ.

    ಕಡತಗಳ ನಾಪತ್ತೆ ನೆಪ: ಮೂಲ 2018ರ ಕಡತಗಳು ಕಳೆದುಹೋಗಿವೆ ಎಂದು ನೆಪ ಹೇಳಿ, ಅಧಿಕಾರಿಗಳು ರೈತರನ್ನು ಕಚೇರಿಗಳಿಗೆ ವರ್ಷಾನುಗಟ್ಟಲೆ ಅಲೆದಾಡಿಸುತ್ತಿದ್ದಾರೆ.

    ಸ್ಮಶಾನ ಭೂಮಿ ಸಮಸ್ಯೆ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಮಂಜೂರಾತಿಗೆ ಮನವಿ ಮಾಡಿದರೂ ಯಾವುದೇ ಕ್ರಮವಾಗಿಲ್ಲ. ವಿಶೇಷವಾಗಿ ಕೈವಲ್ಯಾಪುರ ಗ್ರಾಮದ ಸ್ಮಶಾನ ಭೂಮಿ ವಿಚಾರ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಎಂದು ರೈತರು ತೀವ್ರ ಆಕ್ರೋಶ ಹೊರಹಾಕಿದರು.

    ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಣದ ಕೃಷ್ಣ, ತಾಲ್ಲೂಕಾಧ್ಯಕ್ಷ ನಲ್ಲಮುತ್ತಿ ರಮೇಶಣ್ಣ, ಕಾರ್ಯಾಧ್ಯಕ್ಷ ತಿಪ್ಪೆಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಎಸ್. ಭಾಷಾ ಸಾಬ್, ಶಿವಪುರ ಟಿ. ಹಾಲೇಶ್, ಉಪಾಧ್ಯಕ್ಷ ಪಾಂಡುರಂಗ ನಾಯ್ಕ, ನಗರಾಧ್ಯಕ್ಷ ಓಬಳೇಶ್, ಕೆ. ಶಿವರಾಜ್, ನಗರ ಉಪಾಧ್ಯಕ್ಷರಾದ ನವೀನ್ ಕುಮಾರ್, ಬಿ. ಅಜಯ್ ಕುಮಾರ್, ಕೈವಲ್ಯಾಪುರ ದುರ್ಗಪ್ಪ, ಹಿರೇಹೆಗ್ಡಾಳು ವೀರಭದ್ರಪ್ಪ, ಕುಪ್ಪಿನಕೇರೆ ವೀರೇಶ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.
    – ವರದಿ: ವಂದೇ ಮಾತರಂ ವಿ.ಜಿ. ವೃಷಭೇಂದ್ರ, ಕೂಡ್ಲಿಗಿ

    About The Author

    error: Content is protected !!