July 25, 2026

ಡ್ರಗ್ಸ್ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಕೈಜೋಡಿಸಿ: ಕೆ.ಆರ್.ಪೇಟೆಯಲ್ಲಿ ಡಿವೈಎಸ್ಪಿ ಚೆಲುವರಾಜು ಕರೆ

ಕೆ.ಆರ್.ಪೇಟೆ (ಮಂಡ್ಯ): ವಿದ್ಯಾರ್ಥಿಗಳು ಹಾಗೂ ಯುವಜನರ ಉಜ್ವಲ ಭವಿಷ್ಯಕ್ಕೆ ಮಾರಕವಾಗಿರುವ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ವಿದ್ಯಾರ್ಥಿಗಳು ಸದಾ ಜಾಗೃತರಾಗಿರಬೇಕು ಎಂದು ನಾಗಮಂಗಲ ಡಿವೈಎಸ್ಪಿ ಚೆಲುವರಾಜು ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಲಾಗಿದ್ದ ‘ಡ್ರಗ್ಸ್ ವಿರುದ್ಧದ ಜಾಗೃತಿ ಅಭಿಯಾನ’ದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಅವರು ಮಾತನಾಡಿದರು.


ಡ್ರಗ್ಸ್ ಎಂಬ ಮಾಯಾಲೋಕದ ಮಾದಕ ವಸ್ತುಗಳು ಹಾಗೂ ತಂಬಾಕು ಉತ್ಪನ್ನಗಳು ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ವಿಶೇಷ ಆಕರ್ಷಣೆ ಉಂಟುಮಾಡಿ, ಅವರನ್ನು ನಶೆಯ ವಿಷವರ್ತುಲಕ್ಕೆ ತಳ್ಳುತ್ತವೆ. ಇದರಿಂದ ಅವರ ಭವ್ಯ ಭವಿಷ್ಯ ಹಾಗೂ ವ್ಯಕ್ತಿತ್ವ ಹಾಳಾಗುತ್ತದೆ. ಆದ್ದರಿಂದ ಇಂತಹ ದುರಭ್ಯಾಸಗಳ ವಿರುದ್ಧ ಪ್ರತಿಯೊಬ್ಬರೂ ಎಚ್ಚರದಿಂದಿರಬೇಕು ಎಂದು ತಿಳಿಸಿದರು.
ಕಾಳಸಂತೆಯಲ್ಲಿ ಡ್ರಗ್ಸ್ ಮಾರಾಟ ಮಾಡಿ ವಿದ್ಯಾರ್ಥಿಗಳ ಜೀವನವನ್ನು ನರಕಕ್ಕೆ ತಳ್ಳುವ ಸಮಾಜ ವಿರೋಧಿಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಸಮಾಜಕಂಟಕರ ಅಥವಾ ಡ್ರಗ್ಸ್ ಮಾರಾಟ ಜಾಲದ ಸುಳಿವು ಸಿಕ್ಕ ತಕ್ಷಣ ಪೊಲೀಸರಿಗೆ ಅಥವಾ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಬೇಕು. ಈ ಮೂಲಕ ನಶೆಯಿಂದ ಮುಕ್ತವಾದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಡಿವೈಎಸ್ಪಿ ಚಲುವರಾಜು ಮನವಿ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪಾಲಿಟೆಕ್ನಿಕ್ ಪ್ರಾoಶುಪಾಲ ಗೊರವಾಲೆ ನಾಗರಾಜು ಮಾತನಾಡಿ, “ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ಜಾಲದ ವಿರುದ್ಧ ಜಾಗೃತರಾಗಿರಬೇಕು. ವಿದ್ಯಾಭ್ಯಾಸದ ಅವಧಿಯಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಜೀವನದಲ್ಲಿ ಸಾಧನೆ ಮಾಡಬೇಕು” ಎಂದು ಕರೆ ನೀಡಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್, ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಹಾಗೂ ಹಿರಿಯ ಪ್ರಾಧ್ಯಾಪಕರಾದ ಮಹಾಲಿಂಗೆಗೌಡ ಉಪಸ್ಥಿತರಿದ್ದರು.
ವರದಿ: ಡಾ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!