August 24, 2026

ಸಂವಿಧಾನವು ಸರ್ವರ ರಕ್ಷಣಾ ಕವಚ: ಸುಭಾಷ್ ಮಾಡ್ರಹಳ್ಳಿ

ಗುಂಡ್ಲುಪೇಟೆ: ಸಂವಿಧಾನವು ಸರ್ವರ ರಕ್ಷ ಕವಚ ಆಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಕಾಲೇಜು ಸಭಾಂಗಣದಲ್ಲಿ ‘ಅಪ್ಪು ಸೇವಾ ಟ್ರಸ್ಟ್’ ಹಾಗೂ ‘ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ’ದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಂವಿಧಾನ ಅರಿವು’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸಂವಿಧಾನ ನಮ್ಮನ್ನು ಸರ್ವರೀತಿಯಲ್ಲೂ ಕಾಪಾಡುತ್ತಿದೆ:

ಸಂವಿಧಾನ ನಮ್ಮನ್ನು ಸರ್ವ ರೀತಿಯಲ್ಲೂ ಕಾಪಾಡುತ್ತಿದೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಸಂವಿಧಾನ ರಚನಾ ಜವಾಬ್ದಾರಿಯನ್ನು ಹೊತ್ತಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಆಶಯಗಳನ್ನು ಅಡಕವಾಗಿಸಿದರು. ಅದರ ಮೂಲಕ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಏಳಿಗೆ ಹೊಂದಲು ಹಕ್ಕು, ಅಧಿಕಾರ ಮತ್ತು ಕರ್ತವ್ಯಗಳನ್ನು ಅಳವಡಿಸಿ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಿಗೆ ಸಂವಿಧಾನ ಆಂತರಿಕ ಶಕ್ತಿಯಾಗಿ ಇರುವಂತೆ ಮಾಡಿದರು. ಇಂದು ಪ್ರತಿಯೊಬ್ಬ ಭಾರತೀಯನೂ ಅದರ ಫಲಾನುಭವಿಯಾಗಿದ್ದಾನೆ ಎಂದು ಹೇಳಿದರು.

ಆರೋಗ್ಯಯುತ ಸಮಾಜಕ್ಕೆ ಅರಿವು ಅತ್ಯಗತ್ಯ:

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಾಯಕರು ಹಾಗೂ ಚೆಸ್ಕಾಂ ಕಿರಿಯ ಅಭಿಯಂತರರಾದ ಮಯೂರ್, “ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಸಂವಿಧಾನ ಅನುವು ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಬದುಕು ರೂಪಿಸಿಕೊಳ್ಳಿ, ಶೈಕ್ಷಣಿಕ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ. ಹೆಣ್ಣು-ಗಂಡು ಎಂಬ ಭೇದಭಾವವಿಲ್ಲದೆ ಆರೋಗ್ಯಯುತ ಸಮಾಜದ ನಿರ್ಮಾಣದಲ್ಲಿ ಸಂವಿಧಾನದ ಅರಿವು ಅತ್ಯಗತ್ಯ” ಎಂದರು.

ಸಂವಿಧಾನದ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ:

ಪ್ರಾಸ್ತಾವಿಕವಾಗಿ ಮಾತನಾಡಿದ ಅಪ್ಪು ಸೇವಾ ಟ್ರಸ್ಟ್ ಅಧ್ಯಕ್ಷ ಕಾಗಲವಾಡಿ ರಂಗಸ್ವಾಮಿ, “ಪ್ರಸ್ತುತ ಸಮಾಜದಲ್ಲಿ ಅನೇಕ ವೈರುಧ್ಯಗಳಿವೆ ಹಾಗೂ ಸಂವಿಧಾನದ ಅರಿವಿನ ಕೊರತೆಯಿದೆ. ಇದನ್ನು ಮನಗಂಡು ನಮ್ಮ ಟ್ರಸ್ಟ್ ಸಂವಿಧಾನದ ಮಹತ್ವವನ್ನು ತಿಳಿಸಿಕೊಡುವ ಬಹುಮುಖ್ಯ ಕೆಲಸವನ್ನು ಮಾಡುತ್ತಾ ಬಂದಿದೆ” ಎಂದರು.
ಮಾಜಿ ಪುರಸಭಾ ಸದಸ್ಯ ಎನ್. ಕುಮಾರ್ ಮಾತನಾಡಿ, “ಅಂಬೇಡ್ಕರ್ ಅವರು ಭಾರತಕ್ಕೆ ಗುರುಸಮಾನರು. ಸಂವಿಧಾನದ ಅರಿವು ಮೂಡಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದರು.

ಸಂವಿಧಾನದ ಹಕ್ಕು ಹಾಗೂ ಕರ್ತವ್ಯಗಳನ್ನು ಪಾಲಿಸಿ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಸ್. ವಿನಯ್ ಮಾತನಾಡಿ, “ಡಾ. ಅಂಬೇಡ್ಕರ್ ಅವರ ಅಪಾರ ಪಾಂಡಿತ್ಯದಿಂದಾಗಿ ನಮಗೆ ಸದೃಢವಾದ ಸಂವಿಧಾನ ದೊರೆತಿದೆ. ಸಂವಿಧಾನ ನೀಡಿದ ಹಕ್ಕು, ಅಧಿಕಾರ ಮತ್ತು ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಪಡೆಯಬೇಕು. ಮಹನೀಯರ ತ್ಯಾಗದಿಂದ ಬಂದಿರುವ ಹಕ್ಕುಗಳನ್ನು ಬಳಸಿಕೊಳ್ಳುವುದರ ಜೊತೆಗೆ ಕರ್ತವ್ಯಗಳನ್ನು ಪಾಲಿಸುವುದೇ ನಾವು ಅವರಿಗೆ ನೀಡುವ ಗೌರವ” ಎಂದು ತಿಳಿಸಿದರು.

ಚಿತ್ರಕಲೆ, ಗಾಯನ ಮತ್ತು ಹುಟ್ಟುಹಬ್ಬ ಆಚರಣೆ:

ಕಾರ್ಯಕ್ರಮದ ಆರಂಭದಲ್ಲಿ ಶೋಷಿತರ ವೇದಿಕೆಯ ಜಿಲ್ಲಾಧ್ಯಕ್ಷ ಮುತ್ತಣ್ಣ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಗಾಯಕ ಮಯೂರ್ ತಮ್ಮ ಹಾಡುಗಳ ಮೂಲಕ ಸಭಿಕರನ್ನು ರಂಜಿಸಿದರೆ, ಕಲಾವಿದ ಮಹಮ್ಮದ್ ಗೌಸ್ ವೇದಿಕೆಯಲ್ಲೇ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಬಿಡಿಸಿ ಕಲಾಚಾತುರ್ಯ ಮೆರೆದರು. ಇದೇ ಸಂದರ್ಭದಲ್ಲಿ ಗಾಯಕ ಮಯೂರ್ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಸಮಾರಂಭದಲ್ಲಿ ಚುಟುಕು ಕವಿ ಮಾಧು, ಪುರಸಭಾ ಮಾಜಿ ಸದಸ್ಯರಾದ ಎನ್. ಕುಮಾರ್, ಶಿವಣ್ಣ, ಚಿತ್ರಕಲಾವಿದ ಮಹಮ್ಮದ್ ಗೌಸ್, ಉಪನ್ಯಾಸಕ ಸುಭಾಷ್ ಚಂದ್ರ ಹಾಗೂ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.     ವರದಿ : ಸದಾನಂದ ಕನ್ನೆಗಾಲ. ಗುಂಡ್ಲಪೇಟೆ

About The Author

error: Content is protected !!